ಬೆಂಗಳೂರು: ಕರ್ನಾಟಕ ವಿಧಾನಮಂಡಲ ಸಂಸ್ಥೆ ಆರಂಭಿಸಲಾಗುತ್ತಿದೆ. ಇದರೊಂದಿಗೆ 77 ಸಿಬ್ಬಂದಿ ನೇರ ನೇಮಕ ಮಾಡಿಕೊಳ್ಳುವ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಡಳಿತ ಸುಧಾರಣೆಗೂ ಕ್ರಮ ಕೈಗೊಳ್ಳಲಾಗಿದೆ. ಉತ್ತಮವಾಗಿ ಸದನ ನಡೆಸಲು ಮುಕ್ತ ಮನಸ್ಸಿನಿಂದ ಸಹಕರಿಸಿದ್ದಾರೆ. ಅದೇ ರೀತಿ ಅಧಿಕಾರಿಗಳು, ಮಾಧ್ಯಮದವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
15 ನೇ ವಿಧಾನಸಭೆ ಅಧಿವೇಶನವು 15 ಬಾರಿ ಸಮಾವೇಶಗೊಂಡಿದ್ದು, ಒಟ್ಟು 167 ದಿನಗಳ ಕಾಲ ಸದನದ ಕಾರ್ಯ ಕಲಾಪಗಳು ನಡೆದಿವೆ. ತಾವು ಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ 3 ವರ್ಷ 10 ತಿಂಗಳಾಗುತ್ತಿದೆ. ಅಧಿವೇಶನದಲ್ಲಿ ಅತ್ಯಂತ ಕಡಿಮೆ ಧರಣಿ, ಸಭಾತ್ಯಾಗಗಳು ನಡೆದಿದ್ದು, ಒಂದೆರಡು ಕ್ರಿಯಾಲೋಪ ಪ್ರಸ್ತಾಪವಾಗಿದೆ. 200 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಅತಿಹೆಚ್ಚು ವಿಧೇಯಕಗಳನ್ನು ಅಂಗೀಕರಿಸಿದ ಕೀರ್ತಿಗೆ ಭಾಜನವಾಗಿದೆ ಎಂದು ಮಾಹಿತಿ ನೀಡಿದರು.
ವಿಧೇಯಕಗಳನ್ನು ಮಂಡಿಸಿ ಮುಖ್ಯ ಚರ್ಚೆಗೆ ಎಲ್ಲ ಸದಸ್ಯರಿಗೂ ಅವಕಾಶ ಮಾಡಿಕೊಡಲಾಗಿತ್ತು. ಶೂನ್ಯ ವೇಳೆಯಲ್ಲಿ 280 ವಿಷಯಗಳಿಗೆ ಅವಕಾಶ ದೊರೆತಿದ್ದು, ಗಮನ ಸೆಳೆಯುವ ಸೂಚನೆ ಬಗ್ಗೆಯೂ ಚರ್ಚೆಯಾಗಿದೆ. ಪ್ರಸ್ತಾಪಿತ ವಿಷಯಕ್ಕೆ ನ್ಯಾಯ ಸಿಗುವ ಸದನದಲ್ಲಿ ಮಾಡಲಾಗಿದೆ ಎಂದು ಒಟ್ಟು 6,000 ಚುಕ್ಕೆ ಗುರುತಿನ ಪ್ರಶ್ನೆ ಹಾಗೂ 25,988 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಸದಸ್ಯರು ಕೇಳಿ ಉತ್ತರ ಪಡೆದಿದ್ದಾರೆ.
ಸ್ಪೀಕರ್ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿರುವೆ:ಸದನದ ಕಾರ್ಯಕಲಾಪಗಳ ಜೊತೆಗೆ ಸಂವಿಧಾನದ ಮೇಲಿನ ಚರ್ಚೆ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಲಾಗಿತ್ತು. ಸರ್ಕಾರ, ಲೋಕಸಭೆಯ ಸ್ಪೀಕರ್ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಓಂ ಬಿರ್ಲಾ ಅವರು ದೇಶದ ಉತ್ತಮ ಶಾಸನ ಸಭೆಯನ್ನು ಗುರುತಿಸಲು ಮಾನದಂಡಗಳನ್ನು ರಚಿಸಲು ನನ್ನ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಐವರು ವಿಧಾನಸಭಾಧ್ಯಕ್ಷರ ಸಮಿತಿ ರಚಿಸಿದ್ದರು. ಕಳೆದ ವಾರವಷ್ಟೇ ನಮ್ಮ ಸಮಿತಿಯು ಮಾನದಂಡಗಳನ್ನು ಸಿದ್ಧಪಡಿಸಿ ಲೋಕಸಭೆ ಸ್ಪೀಕರ್ ಅವರಿಗೆ ಸಲ್ಲಿಸಿದೆ ಎಂದು ವಿವರಿಸಿದರು.
ಒಂದು ದೇಶ- ಒಂದು ಚುನಾವಣೆ ಸಂಸದೀಯ ಮೌಲ್ಯಗಳ ಕುರಿತ ಚರ್ಚೆ ಮಾಡಲಾಯಿತು. ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.
ಮೌಲ್ಯಗಳು ಕುಸಿಯುತ್ತಿವೆ: ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರ ಇಡೀ ವಿಶ್ವದಲ್ಲಿ ಮತ್ತೊಂದಿಲ್ಲ. ಆದರೆ, ಬರಬರುತ್ತಾ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಪತ್ರಿಕಾ ರಂಗದ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಆದರ್ಶ, ಮೌಲ್ಯಗಳು ಕುಸಿಯುತ್ತಿವೆ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.