ಬೆಂಗಳೂರು: ಸ್ಯಾಂಟ್ರೋ ರವಿ ಟೀಂಗೆ ಆಶ್ರಯ ನೀಡಿದ ಆರೋಪ ಬೆನ್ನಲ್ಲೇ ಕುಮಾರಕೃಪಾ ಅತಿಥಿಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕರನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಎಂಡಿ ಕುಮಾರಕೃಪಾ ಅತಿಥಿ ಗೃಹದ ಸಹಾಯಕ ವ್ಯವಸ್ಥಾಪಕ ದೇವರಾಜ್ ಹೆಚ್.ಎಸ್. ಅವರನ್ನು ಎತ್ತಂಗಡಿ ಮಾಡಿ ಆದೇಶಿಸಿದ್ದಾರೆ.
ಮುಂದಿನ ಆದೇಶದ ವರೆಗೆ ಕೇಂದ್ರ ಕಚೇರಿಯಲ್ಲಿ ವರದಿ ಮಾಡುವಂತೆ ಆದೇಶಿಸಲಾಗಿದೆ. ಸ್ಯಾಂಟ್ರೋ ರವಿ ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದ. ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಪಕ್ಷ ನಾಯಕರುಗಳು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಕೆಡೆವಿದ ಶಾಸಕರು ಮುಂಬೈನಲ್ಲಿದ್ದಾಗ ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪದ ಹಿನ್ನೆಲೆ ಸ್ಯಾಂಟ್ರೋ ರವಿ ಹೆಸರು ಮುನ್ನಲೆಗೆ ಬಂದಿದೆ.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಹೆಚ್ಡಿಕೆ, ಕುಮಾರಕೃಪ ಗೆಸ್ಟ್‌ಹೌಸ್‌ನಲ್ಲಿ ಸ್ಯಾಂಟ್ರೋ ರವಿ ವ್ಯವಹಾರ. ಇವನಿಗೆ ರೂಂ ಕೊಟ್ಟವರು ಯಾರು? ಯಾರ ರೆಫರೆನ್ಸ್ ಆಧಾರದ ಮೇಲೆ ರೂಂ ಕೊಟ್ಟಿದ್ದರು? ಸಮ್ಮಿಶ್ರ ಸರ್ಕಾರ ಉರುಳಿಸುವ ವೇಳೆ ಅವರನ್ನು ಯಾರು ಎಲ್ಲಿಗೆ ಕರೆದುಕೊಂಡು ಹೋಗಿದ್ದರು ಎಂದು ತನಿಖೆ ಮಾಡಬೇಕು. ನಾನು ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ. ಕಳೆದ ತಿಂಗಳವರೆಗೆ ಕುಮಾರಕೃಪದಲ್ಲಿ ಈ ವ್ಯಕ್ತಿಗೆ ರೂಮ್ ಕೊಟ್ಟವರು ಯಾರು? ಕುಮಾರಕೃಪದಲ್ಲೇ ಈತನ ವ್ಯವಹಾರ ಎಂದು ಗಂಭೀರ ಆರೋಪ ಮಾಡಿದ್ದರು.
ಇತ್ತ ಕೆಕೆ ಗೆಸ್ಟ್‌ಹೌಸ್‌ನಲ್ಲಿ ಸ್ಯಾಂಟ್ರೋ ರವಿಗೆ ಕೊಠಡಿ ಕಲ್ಪಿಸಿರುವ ಬಗ್ಗೆ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಬಿಜೆಪಿ ಸರ್ಕಾರ ಸ್ಯಾಂಟ್ರೋ ರವಿಗೆ ಕೆಕೆ ಗೆಸ್ಟ್ ಹೌಸ್ನಲ್ಲಿ ಕೊಠಡಿ ನೀಡಿ, ಆತನಿಗೆ ವ್ಯವಹಾರ ಮಾಡಲು ಅನುವು ಮಾಡಿಕೊಟ್ಟಿತ್ತು ಎಂದು ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಇದೀಗ ಕೆಕೆ ಗೆಸ್ಟ್ ಹೌಸ್ ಸಹಾಯಕ ಪ್ರಧಾನ ವ್ಯವಸ್ಥಾಪಕ ದೇವರಾಜ್ ಹೆಚ್.ಎಸ್. ಅವರನ್ನು ಎತ್ತಂಗಡಿ ಮಾಡಲು ಕಾರಣ ಎಂದು ಹೇಳಲಾಗಿದೆ.
ಯಾರು ಈ ಸ್ಯಾಂಟ್ರೋ ರವಿ?:ಸಮ್ಮಿಶ್ರ ಸರ್ಕಾರ ಕೆಡೆವಿದ ಶಾಸಕರು ಮುಂಬೈನಲ್ಲಿದ್ದಾಗ ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ಹಿನ್ನೆಲೆ ಸ್ಯಾಂಟ್ರೋ ರವಿ ಹೆಸರು ಮುನ್ನಲೆಗೆ ಬಂದಿದೆ. ಇದರ ಬೆನ್ನಲ್ಲೇ ವರ್ಗಾವಣೆ ವಿಚಾರವಾಗಿ ಡಿವೈಎಸ್‌ಪಿಯೊಬ್ಬರ ಜೊತೆಗೆ ಸ್ಯಾಂಟ್ರೋ ರವಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ಹಲವು ರಾಜಕಾರಣಿಗಳು, ಅಧಿಕಾರಿಗಳ ಜೊತೆ ಲಿಂಕ್ ಇರುವ ಕುರಿತಾಗಿ ಫೋಟೋಗಳು ಹರಿದಾಡುತ್ತಿವೆ.