ಬೆಂಗಳೂರು: ಪಂಗೋಲಿನ್ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಹನುಮಂತ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಬಂಧಿತ ಆರೋಪಿಯಾಗಿದ್ದು, ಆತನಿಂದ 30 ಕೆ.ಜಿ ಪಂಗೋಲಿನ್ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ.
ಔಷಧ, ಅಲಂಕಾರ, ಮಾಂಸದ ಕಾರಣದಿಂದ ಬೇಟೆಯಾಡಲ್ಪಡುತ್ತಿರುವ ಪಂಗೋಲಿನ್ ಒಂದು ನಿರುಪದ್ರವಿ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದದ ಪ್ರಾಣಿಯಾಗಿದೆ. ಈ ಪ್ರಾಣಿ ಉತ್ತರ ಭಾರತ, ಆಗ್ನೇಯ ಏಷ್ಯಾದ ಉತ್ತರ ಭಾಗ, ದಕ್ಷಿಣ ಚೀನಾದಲ್ಲಿ ಹೆಚ್ಚು ಕಂಡು ಬರುತ್ತದೆ. ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗಗಳಲ್ಲಿಯೂ ಪಂಗೋಲಿನ್ ಪ್ರಾಣಿ ಕಾಣಸಿಗುತ್ತದೆ. ಮಾರುಕಟ್ಟೆಯಲ್ಲಿ ಪಂಗೋಲಿನ್ನ ಒಂದು ಚಿಪ್ಪಿಗೆ ತೊಂಬತ್ತು ಸಾವಿರದವರೆಗೂ ಮೌಲ್ಯವಿದ್ದು, ವಿದೇಶದಲ್ಲಿ ಪಂಗೋಲಿನ್ ಚಿಪ್ಪುಗಳಿಗೆ ಅಧಿಕ ಮೌಲ್ಯವಿದೆ.
ಸದ್ಯ ಆರೋಪಿ ಕಿರಣ್ನನ್ನು ಬಂಧಿಸಿರುವ ಹನುಮಂತ ನಗರ ಠಾಣಾ ಪೊಲೀಸರು ಆತನಿಂದ 25 ಲಕ್ಷ ಬೆಲೆ ಬಾಳುವ 30 ಕೆ.ಜಿ ಚಿಪ್ಪುಗಳನ್ನು ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಲ ಪಾವತಿಸಲು ಹೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಹಲ್ಲೆ- ಆರೋಪಿಯ ಬಂಧನ:ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮತ್ತು ಆತನ ಫ್ಯಾಮಿಲಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರದ ಚೌಡೇಶ್ವರಿ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್, ಆತನ ಪತ್ನಿ, ಮಗುವಿನ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಟಿಪ್ಪು ಎಂಬಾತನನ್ನು ಬಂಧಿಸಲಾಗಿದೆ.
ಶಿವಕುಮಾರ್ ಅವರ ಅಂಗಡಿಗೆ ಬರುತ್ತಿದ್ದ ಆರೋಪಿ ಆಗಾಗ ಟೀ, ಸಿಗರೇಟ್ ಪಡೆದು ಸಾಲ ಹೇಳಿ ಹೋಗುತ್ತಿದ್ದನು. ಅದೇ ರೀತಿ ಜನವರಿ 10ರಂದು ಮಧ್ಯಾಹ್ನ ಅಂಗಡಿಗೆ ಬಂದಿದ್ದ ಆರೋಪಿ ಬಳಿ ಶಿವಕುಮಾರ್, ಹಳೆಯ ಸಾಲ 950 ರೂ. ಬಾಕಿ ಇರುವುದನ್ನು ಕೇಳಿದ್ದರು. ಈ ವೇಳೆ, 'ನನಗೆ ಹಣ ಕೇಳುತ್ತೀಯಾ? ನಾನ್ಯಾರು ಅಂತಾ ಸಾಯಂಕಾಲ ತೋರಿಸುತ್ತೇನೆ' ಎಂದಿದ್ದ ಆರೋಪಿ ವಾಪಾಸಾಗಿದ್ದನು. ಅದೇ ದಿನ ಸಂಜೆ ಇನ್ನೂ ಮೂವರೊಂದಿಗೆ ಕಾರಿನಲ್ಲಿ ಬಂದಿದ್ದ ಆರೋಪಿ ಟೀ ಕೇಳಿದಾಗ, ಸಾಲ ಪಾವತಿಸುವಂತೆ ಶಿವಕುಮಾರ್ ಕೇಳಿದ್ದರು.