ಬೆಂಗಳೂರು: ಸರ್ಕಾರೇತರ ಸಂಸ್ಥೆ (ಎನ್.ಜಿ.ಓ)ಗಳು, ರೈತರು ಜನಸಾಮಾನ್ಯರಿಗೆ ವಿವಿಧ ರೀತಿಯ ಆಮಿಷಗಳನ್ನೊಡ್ಡಿ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಹ (39) ಬಂಧಿತ ಆರೋಪಿ. 8-9 ವರ್ಷಗಳಿಂದ ವಂಚಿಸುತ್ತ ಕಳೆದ ಮೂರು ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ. ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜವಾಬ್ಧಾರಿ ಪಡೆದ ಸಿಸಿಬಿ ಪೊಲೀಸರ ತಂಡ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಂಧರು, ವೃದ್ಧರು ಮತ್ತು ವಿಶೇಷಚೇತನರನ್ನು ಪೋಷಿಸುವ ಎನ್.ಜಿ.ಓ. ಸಂಸ್ಥೆಗಳಿಗೆ 100ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ಕೊಡಿಸುವುದಾಗಿ ಹಾಗೂ ಖಾಸಗಿ ಕಂಪನಿಗಳು ನೀಡುವ ಸಿಎಸ್ಆರ್ ಫಂಡ್ ಮತ್ತು ಪೆಟ್ರೋ ಕಂಪನಿಗಳಿಂದ 50 ಲಕ್ಷದಷ್ಟು ಫಂಡ್ ಕೊಡಿಸುವುದಾಗಿ ಸುಮಾರು 2.53 ಲಕ್ಷ ರೂ. ಪಡೆದುಕೊಂಡಿದ್ದ ಆರೋಪಿ, ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಇದೇ ರೀತಿ ಬೆಂಗಳೂರು ನಗರದ 18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳಿಗೆ ವಂಚಿಸಿದ್ದ ಆರೋಪಿಯ ವಿರುದ್ಧ ಹಲಸೂರು, ಪೀಣ್ಯ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಅಲ್ಲದೆ ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುವಂತಹ ಅಮಾಯಕ ರೈತರನ್ನು ಗುರಿಯಾಗಿಸಿಕೊಂಡು ಅವರ ಜಮೀನನ್ನು ಅಭಿವೃದ್ಧಿ ಪಡಿಸುವುದಾಗಿ, ಸರ್ಕಾರದಿಂದ ನೀಡಲಾಗುವ ಸ್ಕೀಂಗಳ ಮುಖಾಂತರ ಸಬ್ಸಿಡಿಗಳನ್ನು ಮಾಡಿಸಿಕೊಡುವುದಾಗಿ, ರೈತಾಪಿ ವರ್ಗದವರು ಬೆಳೆಯುವಂತಹ ಎಳನೀರು, ಕಾಯಿಗಳನ್ನು ಹೊರರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿಯೂ ಈತ ಹಣ ಪಡೆದುಕೊಂಡಿದ್ದ. ಅಲ್ಲದೇ ದೆಹಲಿ, ಲಖನೌ, ಆಗ್ರಾ, ಹಿಮಾಚಲ ಪ್ರದೇಶಗಳಲ್ಲಿ ವಾಸಿಸುವ ವ್ಯಾಪಾರಿಗಳನ್ನು ನಂಬಿಸಿ ಎಳನೀರು ವ್ಯವಹಾರಕ್ಕೆ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ಅವರುಗಳಿಂದಲೂ ಸಹ ಲಕ್ಷಾಂತರ ರೂಗಳನ್ನು ಪಡೆದುಕೊಂಡಿದ್ದ. ಆದರೆ ಯಾರೊಬ್ಬರಿಗೂ ಯಾವುದೇ ವ್ಯವಹಾರ ಮಾಡಿಸದೇ, ಹಣವನ್ನು ಸಹ ಹಿಂತಿರುಗಿಸದೇ ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡು ವಂಚಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.