ಬೆಂಗಳೂರು:ಲೋಕಾಯುಕ್ತ ಇನ್ಸ್ಪೆಕ್ಟರ್ ಹೆಸರಿನಲ್ಲಿ ಕಾರ್ಯಪಾಲಕ ಇಂಜಿನಿಯರ್ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟೇಗಾರಪಾಳ್ಯದ ತ್ಯಾಗರಾಜ್ ಬಂಧಿತ ಆರೋಪಿ. ಈತ ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಕೆ.ಬಿ.ರಾಮದಾಸಪ್ಪ ಅವರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂದು ಕರೆ ಮಾಡಿ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತ್ಯಾಗರಾಜ್ ಅ.4ರಂದು ರಾಮದಾಸಪ್ಪರಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಮುಕ್ತಾಯಗೊಳಿಸಲು ಮೇಲಾಧಿಕಾರಿಗಳಿಗೆ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡಬೇಕಿದೆ. ಇಲ್ಲವಾದರೆ, ನಿಮಗೆ ತೊಂದರೆಯಾಗುವ ಸಂಭವವಿದೆ. ಕೂಡಲೇ ನನ್ನನ್ನು ಭೇಟಿ ಮಾಡಿ ಎಂದು ಹೇಳಿದ್ದ. ರಾಮದಾಸಪ್ಪ ಅವರು ಯಾವುದೋ ಫೇಕ್ ಕಾಲ್ ಇರಬೇಕು ಎಂದು ಸುಮ್ಮನಾಗಿದ್ದಾರೆ.
ಅ.27ರಂದು ರಾಮದಾಸಪ್ಪ ಇನ್ಫೆಂಟ್ರಿ ರಸ್ತೆಯಲ್ಲಿರುವ ಇಲಾಖೆಯ ವಿ.ಜೆ.ಎನ್.ಎಲ್.ಎಂ.ಡಿ ಕಚೇರಿಯಲ್ಲಿದ್ದಾಗ ಮತ್ತೆ ಕರೆ ಮಾಡಿದ್ದ ಆರೋಪಿ, ನಾನು ಲೋಕಾಯುಕ್ತ ಇನ್ಸ್ಪೆಕ್ಟರ್ ಮಾತನಾಡುವುದು, ನಮ್ಮ ಎಡಿಜಿಪಿ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿ ಧ್ವನಿ ಬದಲಾಯಿಸಿ ಆತನೇ ಮತ್ತೆ ಮಾತನಾಡಿ, ನಿಮ್ಮ ಮೇಲೆ ಆರೋಪ ಕೇಳಿ ಬಂದಿದೆ. ಅದನ್ನು ಮುಕ್ತಾಯ ಮಾಡಲು ನಮ್ಮ ಲೋಕಾಯುಕ್ತ ಇನ್ಸ್ಪೆಕ್ಟರ್ ಭೇಟಿ ಮಾಡಿ ಎಂದು ತಿಳಿಸಿದ್ದಾನೆ.