ಜಿಗಣಿ ಪುರಸಭೆ ಮುಂದೆ ಪೌರ ಕಾರ್ಮಿಕರ ಧರಣಿ ಬೆಂಗಳೂರು: ಅಧಿಕಾರಿಗಳ ಸೂಚನೆಯಂತೆ ಆಸ್ತಿ ಡಿಜಿಟಲೀಕರಣ ಕರಪತ್ರ ವಿತರಣೆ ಮಾಡುತ್ತಿದ್ದ ಪೌರ ಕಾರ್ಮಿಕನ ಮೇಲೆ ಏಕಾಏಕಿ ಗ್ರಾಮ ಪಂಚಾಯತ್ ಸದಸ್ಯ ಹಲ್ಲೆ ಮಾಡಿರುವ ಆರೋಪ ಆನೇಕಲ್ ತಾಲೂಕಿನ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಘಟನೆಯನ್ನು ಖಂಡಿಸಿ ಪೌರ ಕಾರ್ಮಿಕರು ಬೆಳಗ್ಗೆ ಮೌನ ಪ್ರತಿಭಟನೆ ನಡೆಸಿ ಕೆಲಸಕ್ಕೆ ಹಾಜರಾಗದೇ ಪುರಸಭೆ ಮುಂದೆ ಧರಣಿಗೆ ಕುಳಿತಿದ್ದರು. ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪುರಸಭೆ ಮುಖ್ಯಾಧಿಕಾರಿ ರಾಜೇಶ್ ಆದೇಶದಂತೆ ಆಸ್ತಿ ಡಿಜಿಟಲೀಕರಣ ಕರಪತ್ರ ಹಂಚುತ್ತಿದ್ದ ಮಧು ಕುಮಾರ್ ಮೇಲೆ ಜಿಗಣಿ ಪುರಸಭೆ 22 ನೇ ವಾರ್ಡ್ನ ಸದಸ್ಯ ವಿನೋದ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಮನೆ ಮನೆಗೆ ತೆರಳಿ ಆಸ್ತಿ ಬಗ್ಗೆ ಮಾಹಿತಿ, ದಾಖಲೆ ಸಂಗ್ರಹ ಮತ್ತು ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಅಂತೆಯೇ, ತಂಡದೊಂದಿಗೆ ಪೌರ ಕಾರ್ಮಿಕ ಮಧು ಎಂಬವರು ನಿನ್ನೆ 23ನೇ ವಾರ್ಡ್ನಲ್ಲಿ ಕರಪತ್ರ ಹಂಚಲು ತೆರಳಿದ್ದರು. ಈ ವೇಳೆ 22 ನೇ ವಾರ್ಡ್ ಸದಸ್ಯ ವಿನೋದ್ ಎಂಬಾತ 23 ನೇ ವಾರ್ಡ್ಗೆ ಬಂದು ಕರಪತ್ರ ಹಂಚುತ್ತಿದ್ದ ಮಧುನನ್ನು ಗದರಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ರಾನ್ಸ್ ಅಧ್ಯಕ್ಷರ ಹೇಳಿಕೆ ಕರಪತ್ರ ಹಂಚಿಕೆ ಆರೋಪ: ಮುಸ್ಲಿಂ ಯವಕರ ಕಸ್ಟಡಿ ಖಂಡಿಸಿ ಪ್ರತಿಭಟನೆ
'ಸಿಇಒ ರಾಜೇಶ್ ಸರ್ ಆಜ್ಞೆಯಂತೆ 23 ನೇ ವಾರ್ಡ್ನ ಮನೆ ಮನೆಗೆ ಕರ ಪತ್ರ ಹಂಚುತ್ತಿದ್ದೆ. ನನ್ನ ಜೊತೆ ನಿಗದಿಯಾಗಿದ್ದ ಮೂವರು ಮಹಿಳಾ ಸಿಬ್ಬಂದಿ ಬಂದು ಸಹಕಾರ ನೀಡಿದರು. ಆದರೆ, 23 ನೇ ವಾರ್ಡ್ಗೆ ಸಂಬಂಧಿಸದ 22 ನೇ ವಾರ್ಡ್ನ ಸದಸ್ಯ ವಿನೋದ್ ಏಕಾಏಕಿ ಬಂದು ನನ್ನ ಕೆನ್ನೆಗೆ ಬಾರಿಸಿದ. ನನ್ನ ಪರಿಚಯವಿದ್ದರೂ ಹೀಗೆ ಮಾಡಿರುವುದು ನೋವುಂಟು ಮಾಡಿದೆ. ಈ ವರೆಗೆ ನಾನು ಯಾರ ಬಗ್ಗೆಯೂ ನೋವಾಗುವಂತೆ ನಡೆದುಕೊಂಡಿಲ್ಲ. ಹೀಗಾಗಿ, ನನ್ನ ಸಹೋದ್ಯೋಗಿಗಳು ನನಗೆ ಸಹಕರಿಸಿ, ಕೆಲಸಕ್ಕೆ ಹಾಜರಾಗದೆ ಧರಣಿ ಕುಳಿತು ನನಗೆ ಧೈರ್ಯ ತುಂಬಿದ್ದಾರೆ' ಎಂದು ಮಧು ಹೇಳಿದ್ದಾರೆ.
ಈ ಕುರಿತಂತೆ ಜಿಗಣಿ ಪುರಸಭೆ ಮುಖ್ಯಾಧಿಕಾರಿ ರಾಜೇಶ್ ಅವರನ್ನು ಕೇಳಿದ್ರೆ, 'ಆಸ್ತಿ ಡಿಜಿಟಲೀಕರಣ ಕರಪತ್ರ ಹಂಚುವಂತೆ ಪೌರ ಕಾರ್ಮಿಕ ಮಧುಗೆ ನಾನೇ ಸೂಚನೆ ನೀಡಿದ್ದೆ. ಅಂತೆಯೇ ಆತ ಕರಪತ್ರ ಹಂಚಿಕೆ ಮಾಡಿದ್ದಾನೆ. ಈ ವೇಳೆ ಹಲ್ಲೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ವಿಚಾರ ಮಾಡುತ್ತೇನೆ. ಪೌರ ಕಾರ್ಮಿಕರ ರಕ್ಷಣೆ ನನ್ನ ಜವಾಬ್ದಾರಿ, ದೂರು ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು. ಆಸ್ತಿ ಡಿಜಿಟಲೀಕರಣ ಬಗ್ಗೆ ಈಗಾಗಲೇ ಎಲ್ಲಾ ಪುರಸಭೆ ಅಧಿಕಾರಿಗಳಿಗೆ ಪತ್ರ ಮೂಲಕ ತಿಳಿಸಲಾಗಿದೆ' ಎಂದಿದ್ದಾರೆ.
ಇದನ್ನೂ ಓದಿ:ಸಿಎಂ ಕಾರ್ಯಕ್ರಮದಲ್ಲಿ ಕರಪತ್ರ ಎಸೆದು ಯುವಕ ಪ್ರತಿಭಟನೆ.. ಯಾತಕ್ಕಾಗಿ ಈ ಆಕ್ರೋಶ?
ಇನ್ನು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ವಿನೋದ್ ಅವರನ್ನು ಪ್ರತಿಕ್ರಿಯೆಗಾಗಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ 'ನಾನು ನಿನ್ನೆ ಸಂಜೆಯಿಂದ ಸೌದತ್ತಿ ಪ್ರವಾಸದಲ್ಲಿದ್ದೇನೆ, ಬಂದು ಪ್ರತಿಕ್ರಿಯಿಸುವುದು ತಡವಾಗುತ್ತದೆ. ನಾನು ಮಧು ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದೆ. ಆದರೆ, ಹಲ್ಲೆ ಮಾಡಿಲ್ಲ. ಆತ ನನಗೆ ಶಿಷ್ಯನಂತಿದ್ದ. ಆತನ ಜೊತೆ ಬಂದಿದ್ದ ಮೂವರು ಮಹಿಳಾ ಸಿಬ್ಬಂದಿ ಹೊಸಬರು. ಅವರು ಯಾರೆಂದು ನನಗೆ ತಿಳಿದಿಲ್ಲ. ನಾನು ಕೇಳಿದ ಪ್ರಶ್ನೆಗೆ ಆತ ಉದ್ದಟತನದ ಉತ್ತರ ಕೊಟ್ಟ. ನನ್ನ ಅನುಮತಿಯಿಲ್ಲದೇ, ನನಗೆ ಒಂದು ಮಾತು ತಿಳಿಸದೇ ಸರ್ವೇ ಕಾರ್ಯಕ್ಕೆ ಇಳಿದಿದ್ದು ಸಿಟ್ಟು ತರಿಸಿತು. ಹಾಗಾಗಿ, ಆತನಿದ್ದ ಸ್ಥಳಕ್ಕೆ ಹೋಗಿ ಗದರಿಸಿದೆ ಅಷ್ಟೇ, ಹೊಡೆದಿಲ್ಲ ಎಂದಿದ್ದಾರೆ.