ಬೆಂಗಳೂರು :ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಶನಿವಾರ ಮದ್ಯಾಹ್ನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಧಾರಣ್ (28) ಎಂಬಾತನನ್ನು ಬ್ಲೇಡ್ನಿಂದ ಕತ್ತು ಕೊಯ್ದು ಕೊಲೆಗೈದ ನಂತರ ಚೀಲದಲ್ಲಿ ತುಂಬಿ ಶವಕ್ಕೆ ಬೆಂಕಿ ಹಾಕಲಾಗಿದೆ. ಆರೋಪಿ ವಿಜಯಕುಮಾರ್ (33)ನನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೃತ ಸುಧಾರಣ್ ಹಾಗೂ ವಿಜಯ್ ಕುಮಾರ್ ಇಬ್ಬರೂ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಹಣದ ವಿಷಯವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು.'ತನ್ನ ಜೇಬಿನಲ್ಲಿದ್ದ ಹಣ ಯಾಕೆ ತೆಗೆದುಕೊಂಡೆ' ಎಂದಿದ್ದ ಸುಧಾರಣ್, ವಿಜಯಕುಮಾರ್ ಜೊತೆ ಜಗಳ ಆರಂಭಿಸಿದ್ದ. ಮಾತಿಗೆ ಮಾತು ಬೆಳೆದು ಜಗಳ ಜೋರಾದಾಗ ಸಿಟ್ಟಿಗೆದ್ದ ವಿಜಯಕುಮಾರ್ ಬ್ಲೇಡ್ನಿಂದ ಸುಧಾರಣ್'ನ ಕತ್ತು ಕುಯ್ದು ಕೊಲೆ ಮಾಡಿದ್ದ. ನಂತರ ಶವವನ್ನು ಚೀಲದಲ್ಲಿ ತುಂಬಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಪ್ರಕರಣ- ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರ ಹತ್ಯೆ :ಉಡುಪಿ ಜಿಲ್ಲೆಯ ನೇಜಾರುವಿನ ತೃಪ್ತಿನಗರ ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭಾನುವಾರ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ವೇಳೆ ವೃದ್ಧೆಯೊಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದವರನ್ನು ಹಸೀನಾ (46), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಎಂದು ಗುರುತಿಸಲಾಗಿತ್ತು. ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಅಪರಿಚಿತ ಗುಂಪಿನಿಂದ ಯುವಕನ ಕೊಲೆ :ಇನ್ನೊಂದೆಡೆಭಾನುವಾರ ಸಂಜೆ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವದ ಬಳಿ ಇರುವ ಡಾಬಾದ ಮುಂಭಾಗದಲ್ಲಿ ಫೋಟೋಶೂಟ್ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಯುವಕನೋರ್ವನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದೊಡ್ಡಬಳ್ಳಾಪುರ ನರಗದ ಕಚೇರಿಪಾಳ್ಯದ ನಿವಾಸಿ ಸೂರ್ಯ (22) ಕೊಲೆಗೀಡಾಗಿದವನು. ಮೃತ ಯುವಕ ಐಟಿಐ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಹಿನ್ನೆಲೆ ಫೋಟೋಶೂಟ್ಗಾಗಿ ಹೋಗಿದ್ದ ವೇಳೆ ಘಟನೆ ನಡೆದಿದೆ. ಕೊಲೆಯಾದ ಯುವಕ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳನ್ನು ಮಾಡುತ್ತಿದ್ದನು. ಹೀಗಾಗಿ ರೀಲ್ಸ್ಗಾಗಿ ವಿಡಿಯೋ ಮತ್ತು ಫೋಟೋ ಶೂಟ್ ಮಾಡಲು ಸ್ನೇಹಿತರ ಜೊತೆ ರಾಮೇಶ್ವರ ಗ್ರಾಮದ ಬಳಿಯ ಡಾಬಾಕ್ಕೆ ಹೋಗಿದ್ದಾಗ ಕೃತ್ಯ ನಡೆದಿದೆ.
ಇದನ್ನೂ ಓದಿ :ಗೋಕಾಕ್ನಲ್ಲಿ ಯುವಕನ ಹತ್ಯೆ: ಆರೋಪಿ ಮನೆ ಮೇಲೆ ಕಲ್ಲು ತೂರಿ ಆಕ್ರೋಶ