ಬೆಂಗಳೂರು :ಬಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ನವನೀತಾ (35) ಹಾಗೂ ಸಾಯಿ ಸೃಜನ್ (8) ನನ್ನು ಹತ್ಯೆ ಮಾಡಿದ್ದ ಆಕೆಯ ಪ್ರಿಯಕರ ಶೇಖರ್ನನ್ನು ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನವನೀತಾ ತನ್ನ ಪತಿಯನ್ನು ತೊರೆದು ಮಗನೊಂದಿಗೆ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ, ನವನೀತಾಳಿಗೆ ಆರೋಪಿ ಶೇಖರ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಆದರೆ, ಇತ್ತೀಚಿಗೆ ನವನೀತ ಶೇಖರ್ನನ್ನು ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಶೇಖರ್, ಲೋಕೇಶ್ನ ಸಹವಾಸ ನಿಲ್ಲಿಸುವಂತೆ ನವನೀತಾಳಿಗೆ ಎಚ್ಚರಿಕೆ ಸಹ ನೀಡಿದ್ದ. ಆದರೂ ನವನೀತ ಲೋಕೇಶ್ ಜೊತೆ ಸಂಪರ್ಕದಲ್ಲಿದ್ದಳು.
ಸೋಮವಾರ (4/09/2023) ಎಂದಿನಂತೆ ನವನೀತಾಳ ಮನೆಗೆ ಬಂದಿದ್ದ ಶೇಖರ್ ನವನೀತಾಳ ಮಗನನ್ನು ಮನೆಯಿಂದ ಆಚೆ ಕಳುಹಿಸಿ ಆಕೆಯೊಂದಿಗೆ ಗಲಾಟೆ ಆರಂಭಿಸಿದ್ದ. ಈ ವೇಳೆ ಚಾಕುವಿನಿಂದ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ. ಬಳಿಕ ಮನೆಗೆ ಬಂದ ನವನೀತಾರ ಮಗನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಆತನ ಎರಡೂ ಕೈಕಾಲುಗಳನ್ನು ಕಟ್ಟಿದ್ದ. ನಂತರ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತ ದೇಹಗಳನ್ನು ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದ.