ಬೆಂಗಳೂರು: ಕೊರೊನಾ ಮಾರಕ ಅಲ್ಲ, ಭಯ ಬೇಡ ಅಂತಿದ್ದರೂ ವೈರಸ್ ಹರಡುವ ಪರಿಗೆ ಎಲ್ಲರೂ ಹೆದರಿದ್ದಾರೆ. ಇತ್ತ ಕೊರೊನಾವನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಗೆಲ್ಲಬೇಕು ಎನ್ನುವ ಪಾಠ ಕಲಿತಿದ್ದಾಯ್ತು. ಇಷ್ಟೆಲ್ಲದರ ನಡುವೆ ದಿನಗಳು ಉರುಳಿದಷ್ಟೇ ಬೇಗನೇ ಕೊರೊನಾ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.
ಸರ್ಕಾರ ಇದರ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಕಾರದ ಮೊರೆಹೋಯಿತು. ಮೊದಮೊದಲು ಅಸಹಕಾರ ತೋರಿದ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆ ನೀಡಲಿಲ್ಲ. ಇದರಿಂದ ರೋಗಿಗಳು ಪರದಾಡುವಂತಾಯಿತು. ಬಳಿಕ ಸರ್ಕಾರ ಬಾಯಿ ಮಾತಲ್ಲೇ ವಾರ್ನಿಂಗ್ ಕೊಟ್ಟಿತು. ಅದಕ್ಕೂ ಬಗ್ಗದಿದ್ದಾಗ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಕಾರಣ ಕೇಳ್ತು. ಇದಕ್ಕೂ ಜಗ್ಗದ ಆಸ್ಪತ್ರೆಗಳ ವಿರುದ್ಧ ಒಪಿಡಿ ಬಂದ್ ಮಾಡಿಸಿತು. ನಟಿ ಸುಧಾರಾಣಿ ಕೂಡ ಇದರಿಂದ ತೊಂದರೆ ಅನುಭವಿಸಿದ್ದರು.
ಕೆಲ ಖಾಸಗಿ ಆಸ್ಪತ್ರೆಗಳು ಲ್ಯಾಬ್ ಟೆಸ್ಟ್ ಹಾಗೂ ಕೊರೊನಾ ಚಿಕಿತ್ಸೆಗೆ ಲಕ್ಷ ಲಕ್ಷ ಬಿಲ್ ಹಾಕಿದ್ದೂ ಇದೆ. ಸರ್ಕಾರದ ದರವೇ ಬೇರೆ, ಖಾಸಗಿ ಆಸ್ಪತ್ರೆಗಳ ದರವೇ ಬೇರೆಯಿತ್ತು. ಹೀಗಾಗಿ, ಕೆಪಿಎಂಇ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಇದಕ್ಕೆ ಕಡಿವಾಣ ಹಾಕಲು ಬೆಂಗಳೂರಿನ 20ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಹಾಗೆಯೇ 4 ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡಲಾಗಿತ್ತು. ಈ ಚಾಳಿ ಮುಂದುವರೆದರೆ ಕ್ರಮ ಅನಿವಾರ್ಯ ಅಂತಾರೆ ಸಚಿವ ಸುಧಾಕರ್.
ಹಣ ಪೀಕುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲೂ ಅದೇ ಫಜೀತಿ. ಆಯುಷ್ಮಾನ್ ಭಾರತ್ ಸೇರಿ ಇತರ ವಿಮಾ ಕಂಪನಿಗಳು ಹಣ ಕ್ಲೈಮ್ ಮಾಡಿ ಕೊಳ್ಳೆ ಹೊಡೆಯುತ್ತಿವೆ. ಅತ್ತ ದಾವಣಗೆರೆಯಲ್ಲೂ ಖಾಸಗಿ ಕ್ಲಿನಿಕ್ಗಳು, ನರ್ಸಿಂಗ್ ಹೋಂಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ಪೀಕಲಾಗ್ತಿದೆ ಎಂಬ ಆರೋಪವಿದೆ. ವಿಜಯಪುರದಲ್ಲೂ ಹೆಚ್ಚು ಹಣ ವಸೂಲಿ ಮಾಡಲಾಗ್ತಿದೆ ಎಂಬ ಆರೋಪದ ಹಿನ್ನೆಲೆ ಜಿಲ್ಲಾಡಳಿತ ಕಮಿಟಿ ರಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಆದರೂ ಪಾಸಿಟಿವ್ ಬಂದರೆ ಲಕ್ಷಾಂತರ ಖರ್ಚಾಗುತ್ತೆ ಅನ್ನೋ ಭಯ ಜನರಲ್ಲಿದೆ. ಖಾಸಗಿ ಆಸ್ಪತ್ರೆಗಳ ದಂಧೆಗೆ ಸಂಪೂರ್ಣ ಕಡಿವಾಣ ಬೀಳಬೇಕಿದೆ.