ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ 20 ತಿಂಗಳ ಅಂತರದಲ್ಲಿ ಹೂಡಿದ ಹಣವನ್ನ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಹಂತ - ಹಂತವಾಗಿ 1 ಕೋಟಿಗಿಂತ ಹೆಚ್ಚು ಹಣ ಪಡೆದು ಅರ್ಚಕನಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ಚಕ ರಾಘವೆಂದ್ರ ಆಚಾರ್ಯ ಎಂಬುವರು ನೀಡಿದ ದೂರಿನ ಮೇರೆಗೆ ತಮಿಳುನಾಡು ಮೂಲದ ಶೇಷಗಿರಿ ಎಂಬಾತನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಶೇಷಗಿರಿ ಕಳೆದ ಮೂರು ವರ್ಷಗಳಿಂದ ನಗರದಲ್ಲೇ ವಾಸ್ತವ್ಯ ಹೂಡಿದ್ದರು. ಬಿಕಾಂ ಪದವೀಧರನಾಗಿದ್ದ 44 ವರ್ಷದ ಆರೋಪಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಂತರ ಬ್ಯಾಂಕಿಂಗ್ ಹಾಗೂ ಷೇರು ಮಾರ್ಕೆಟಿಂಗ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಪ್ರಸಿದ್ಧ ಮಠವೊಂದರಲ್ಲಿ ಆರ್ಚಕನಾಗಿದ್ದ ರಾಘವೇಂದ್ರ ಅವರಿಗೆ ಆರೋಪಿ ಶೇಷಗಿರಿಯ ಪರಿಚಯವಾಗಿದೆ. ಬಳಿಕ ಶೇಷಗಿರಿ ಮಠದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ವರ್ಷ ಜಾಗ ಖರೀದಿಸಲು ಹಾಗೂ ಷೇರು ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಹಣ ಸಂಪಾದಿಸಬಹುದು ಎಂದು ಆಮಿಷವೊಡ್ಡಿ ಹಂತ-ಹಂತವಾಗಿ 1.07 ಕೋಟಿ ರೂಪಾಯಿ ಹಣವನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡಿದ್ದನು.
ಹಣ ಬಂದ ಬಳಿಕ ಷೇರು ಮಾರ್ಕೆಟಿಂಗ್ಗೆ ಹಾಕಿದ್ದ ಹಣವೆಲ್ಲವೂ ನಷ್ಟಕ್ಕೊಳಗಾಗಿದ್ದ ಎಂದು ಹೇಳಿದ್ದ. ಜಾಗ ಕೊಡಿಸದೇ ಹಣ ನೀಡದೆ ಸತಾಯಿಸುತ್ತಿದ್ದ. ಪಟ್ಟು ಹಿಡಿದು ಕೇಳಿದಾಗ 30 ಲಕ್ಷ ಹಣ ನೀಡಿದ್ದ. ಉಳಿದ ಹಣ ನೀಡದೆ ಸತಾಯಿಸುತ್ತಿದ್ದ. ಅನುಮಾನ ಬಂದು ಸತತ ಒತ್ತಡ ಹಾಕಿದಕ್ಕೆ ಪೋನ್ ಸ್ವಿಚ್ಡ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ದೂರು ನೀಡಿದ ಮೇರೆಗೆ ಶೇಷಗಿರಿಯನ್ನ ತಮಿಳುನಾಡಿನಲ್ಲಿ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಯುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಅರ್ಚಕರಿಗೆ ತಿಳಿಯದಂತೆ ಸ್ವಂತ ಪ್ರಾಪರ್ಟಿ ಸಹ ಸೇಲ್ ಡೀಡ್ ಮಾಡಿಕೊಂಡಿದ್ದ ಬಗ್ಗೆ ಗೊತ್ತಾಗಿದೆ. ಸದ್ಯ ಬಂಧಿತನಿಂದ 45 ಲಕ್ಷ ಹಣ ಹಾಗೂ ಜಾಗದ ದಾಖಲೆ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ.. ಮಹಿಳೆಗೆ 18.66 ಲಕ್ಷ ವಂಚನೆ
ಎಐ ಬಳಸಿ ವ್ಯಕ್ತಿಗೆ ವಂಚನೆ:ಕೆಲ ದಿನಗಳ ಹಿಂದೆ ಕೇರಳದಲ್ಲಿ ಹೈಟೆಕ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು.ಕೃತಕ ಬುದ್ಧಿಮತ್ತೆ ಬಳಸಿ ನಕಲಿ ವಿಡಿಯೋ ಕಾಲ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ಘಟನೆಯ ಬಗ್ಗೆ ಕೇರಳ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ವಂಚನೆ ದೇಶದಲ್ಲಿ ಇದೇ ಮೊದಲಾಗಿದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ ಗುಂಪಿನಲ್ಲಿರುವ ನಂಬರ್ ಅನ್ನು ಹ್ಯಾಕ್ ಮಾಡುವ ಮೂಲಕ ಗುಂಪಿನ ಸದಸ್ಯರ ವಿವರ ಪಡೆದು ವಂಚನೆ ಮಾಡಲಾಗುತ್ತಿದೆ ಎಂದು ಕೋಯಿಕ್ಕೋಡ್ ಡಿಸಿಪಿ ಕೆಇ ಬೈಜು ತಿಳಿಸಿದ್ದರು.