ಬೆಂಗಳೂರು: ಲಾಕ್ಡೌನ್ ವೇಳೆ ಹಾಡಹಾಗಲೇ ದರೋಡೆ ಮಾಡಿದ್ದ ಸುಲಿಗೆಕೋರರನ್ನು ಕೆ.ಆರ್.ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್ ಪೇಟೆಯ ಜಾನಿ ಬಂಧಿತ ಆರೋಪಿ. ಲಾಕ್ಡೌನ್ ವೇಳೆ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಇಬ್ಬರು ಆರೋಪಿಗಳು ಅಡ್ಡಗಟ್ಟಿ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿತ್ತು. ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಕೆ.ಆರ್.ಮಾರ್ಕೆಟ್ ಪೊಲೀಸರಿಗೆ ಸೂಚನೆ ನೀಡಿದ್ದರು. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಜಾನಿ ಕಳೆದ ವರ್ಷ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಮೇರೆಗೆ ಕಳೆದ ಮಾರ್ಚ್ನಲ್ಲಿ ಹೊರಬಂದು ಹಳೆ ಕಾಯಕ ಮುಂದುವರೆಸಿದ್ದ. ಪ್ರಕರಣದಲ್ಲಿ ಮತ್ತೋರ್ವ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದೇವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.