ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಬೆಳವಣಿಗೆಗಿಂತ ಅಧಿಕಾರಗಳ ಕಿತ್ತಾಟ, ಸಮಸ್ಯೆಗಳ ಹಗ್ಗಜಗ್ಗಾಟಕ್ಕೆ ಸದ್ದು ಮಾಡುತ್ತಿದೆ. ಇದೀಗ ಅಂತಹುದಕ್ಕೆ ಒಂದು ಸುದ್ದಿಗೆ ಬೆಂಗಳೂರು ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. ಹಾಲಿ ಕುಲಸಚಿವರ ನಿರ್ಗಮನಕ್ಕೂ ಮುನ್ನವೇ ಅಧಿಕಾರ ಚಲಾಯಿಸಿ ಪ್ರೊ.ಕೊಟ್ರೇಶ್ ಮುಜುಗರಕ್ಕೀಡಾಗಿದ್ದಾರೆ.
ಅನಧಿಕೃತವಾಗಿ ಅಧಿಕಾರ ಪಡೆದು ಸಿಬ್ಬಂದಿ ಸಭೆ ಕರೆದಿದ್ದಾರೆ. ಅಧಿಕೃತವಾಗಿ ಅಧಿಕಾರ ಸ್ವೀಕರಿಸದೆ ಕಡತಗಳಿಗೆ ಸಹಿ ಹಾಕಿರುವ ಪ್ರೊ.ಕೊಟ್ರೇಶ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಕೆ.ಜ್ಯೋತಿ ದೂರು ನೀಡಿದ್ದಾರೆ.
ಪ್ರೊ.ಕೊಟ್ರೇಶ್ ವಿರುದ್ಧ ದೂರು ಅಂದಹಾಗೇ, ಬೆಂಗಳೂರು ವಿವಿಯಲ್ಲಿ ಕುಲಸಚಿವೆಯಾಗಿ ಹಾಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಕೆ. ಜ್ಯೋತಿ ಗಮನಕ್ಕೆ ಬಾರದೇ ಪ್ರೋ. ಕೊಟ್ರೇಶ್ ಸಿಬ್ಬಂದಿ ಸಭೆ ಕರೆದಿದ್ದಾರೆ.
ಈ ಕುರಿತು ದೂರಿನ ಪತ್ರದಲ್ಲಿ ಜ್ಯೋತಿಯವರು, ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಂ. ಕೊಟ್ರೇಶ್ ರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರ(ಆಡಳಿತ) ಹುದ್ದೆಗೆ ವರ್ಗಾಯಿಸಲಾಗಿದೆ. ಆದರೆ ಅವರಿಗೆ ಹಾಲಿ ಪ್ರಭಾರದಲ್ಲಿರುವ ಕೆಳ ಸಹಿದಾರರು ಪ್ರಭಾರ ಹಸ್ತಾಂತರಿಸಿರುವುದಿಲ್ಲ.
ಆದಾಗಿಯೂ ದಿನಾಂಕ02.12.2021 ರಂದು ಸಂಜೆ ಸುಮಾರು 6:14 ರ ಸಮಯದಲ್ಲಿ ನಾನು ಕಚೇರಿಯಲ್ಲಿಲ್ಲದ ಸಮಯದಲ್ಲಿ ನನ್ನ ಕಚೇರಿಯನ್ನು ಅನಧಿಕೃತವಾಗಿ ಪ್ರವೇಶಿಸಿ ನನ್ನ ಸುಪರ್ದಿಯಲ್ಲಿದ್ದ ಕಡತಗಳು ಮತ್ತು ಪತ್ರಗಳನ್ನು ಪಡೆದು ಕಾರ್ಯನಿರ್ವಹಿಸಿರುತ್ತಾರೆಂದು ನನ್ನ ಆಪ್ತ ಕಾರ್ಯಾಲಯದ ಸಿಬ್ಬಂದಿಗೆ ತಿಳಿಸಿರುತ್ತಾರೆ. ಅದರಂತೆ ಸಿಸಿ ಟಿವಿಯನ್ನು ಪರಿಶೀಲಿಸಲಿಸಿದಾಗ ಸಂಬಂಧಪಟ್ಟ ದೃಶ್ಯಗಳಿಂದ ಖಚಿತವಾಗಿದೆ. ಈ ಬಗ್ಗೆ ಅವರನ್ನು ಕೇಳಿದಾಗ ಕುಲಪತಿಗಳ ಮೌಖಿಕ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಲಭ್ಯವಿದ್ದು, ಈ ರೀತಿ ಅನಧಿಕೃತ ನಿರ್ದೇಶನ ನೀಡಿರುವ ಮಾನ್ಯ ಕುಲಪತಿಗಳ ಮೇಲೆ ಹಾಗೂ ಕಾರ್ಯನಿರ್ವಹಿಸಿರುವ ಪ್ರೊ. ಎಂ. ಕೊಟ್ರೇಶ್ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.