ಬೆಂಗಳೂರು:ಈ ಹಿಂದೆ ಬೆಂಗಳೂರಿನ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಹಾಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಅವರಿಗೆ ಹೈಕೋರ್ಟ್ನ ಏಕ ಸದಸ್ಯ ಪೀಠ ವಿಧಿಸಿದ್ದ 25 ಸಾವಿರ ರೂ ದಂಡಕ್ಕೆ ದ್ವಿಸದಸ್ಯ ಪೀಠ ತಡೆ ನೀಡಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಾ ಮಹೇಶ್ ಜೋಶಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಮತ್ತು ಎಸ್.ರಾಜಯ್ಯ ಅವರಿದ್ದ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೂ ಏಕ ಸದಸ್ಯ ಪೀಠಕ್ಕೆ ತಡೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಮಹೇಶ್ ಜೋಶಿ ದೂರದರ್ಶನದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದಾಗ ದೂರದರ್ಶನಕ್ಕೆ ಸಂಬಂಧಿಸಿದಂತೆ ಎಸ್. ಭಜಂತ್ರಿ ಎಂಬ ವ್ಯಕ್ತಿಯೊಬ್ಬರು 2009ರ ಫೆಬ್ರವರಿ 26 ರಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಾಹಿತಿ ನೀಡಿರಲಿಲ್ಲ. ಹಾಗಾಗಿ, ಅವರು ಎರಡನೇ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. ಆ ಪ್ರಾಧಿಕಾರ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶಿಸಿತ್ತು.
ಅದರಂತೆ ಮಾಹಿತಿ ಒದಗಿಸುವುದನ್ನು ಬಿಟ್ಟು, ಮೇಲ್ಮನವಿ ಪ್ರಾಧಿಕಾರದ ಆದೇಶವನ್ನೇ ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಏಕ ಸದಸ್ಯಪೀಠ, ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಮಾಹಿತಿ ಅಧಿಕಾರಿ(ಪಿಐಒ)ಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿಲ್ಲ ಎಂದು ಆದೇಶ ನೀಡಿತ್ತುತ್ತಲ್ಲದೆ, ಅರ್ಜಿ ವಜಾಗೊಳಿಸಿ 25 ಸಾವಿರ ರೂ. ದಂಡ ವಿಧಿಸಿತ್ತು.
ಮೊದಲನೇ ಮೇಲ್ಮನವಿ ಪ್ರಾಧಿಕಾರವ 15 ದಿನದಲ್ಲಿ ಮಾಹಿತಿ ಒದಗಿಸುವಂತೆ 2009ರ ಮೇ 5ರಂದು ಸೂಚನೆ ನೀಡಿತ್ತು. ಆದರೂ ಮಾಹಿತಿ ಒದಗಿಸಿರಲಿಲ್ಲ. ಇದರಿಂದ ಅರ್ಜಿದಾರರು 2009ರ ಸೆಪ್ಟೆಂಬರ್ 21 ರಂದು ಎರಡನೇ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಎರಡನೇ ಮೇಲ್ಮನವಿ ಪ್ರಾಧಿಕಾರ ಕೇಳಿದ ಮಾಹಿತಿಯನ್ನು 10 ದಿನದಲ್ಲಿ ಒದಗಿಸುವಂತೆ ಸೂಚನೆ ನೀಡಿದ್ದರು.