ಬೆಂಗಳೂರು:ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಡ್ರಗ್ಸ್ ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ ಶ್ರೀಕೃಷ್ಣ ಇದುವರೆಗೂ 30ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿರುವ ಕುರಿತು ಮಾಹಿತಿ ಹೊರ ಬಿದ್ದಿದೆ.
ಆರೋಪಿ ಶ್ರೀಕೃಷ್ಣನ ಕುರಿತು ಮಾಹಿತಿ ನೀಡಿದ ನಗರ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈ ಕುರಿತು ನಗರ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಶ್ರೀಕೃಷ್ಣ ಎಂಬಾತನನ್ನು ಬಂಧಿಸಿ ಡಿ. 1ರತನಕ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದೇವೆ. ತನಿಖೆ ವೇಳೆ ಹಲವು ಮಾಹಿತಿ ಹೊರ ಹಾಕಿದ್ದು, ಇದುವರೆಗೂ 30 ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದಾನೆ. ಈ ಪ್ರಕರಣದ ಇತರೆ ಆರೋಪಿಗಳಾದ ಸುನೀಶ್, ಹೇಮಂತ್, ಪ್ರಸಿದ್ ಶೆಟ್ಟಿ ಇವನಿಗೆ ಹ್ಯಾಕ್ ಮಾಡಲು ಸಹಾಯ ಮಾಡಿದ್ದಾರೆ. ಅನೇಕ ಅಂತಾರಾಷ್ಟ್ರೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದ ಶ್ರೀಕೃಷ್ಣ 2014ರಿಂದ 2017ರವರೆಗೆ ನೆದರ್ಲ್ಯಾಂಡ್ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಸ್ವದೇಶಕ್ಕೆ ವಾಪಸಾಗಿದ್ದ. ತಾಂತ್ರಿಕವಾಗಿ ಪರಿಣಿತಿ ಹೊಂದಿದ್ದ ಈತ ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳಾದ ಸುನೀಶ್ ಹೆಗ್ಡೆ, ಪ್ರಸಿದ್ದ್ ಶೆಟ್ಟಿ, ಹೇಮಂತ್ ಗ್ಯಾಂಗ್ ಸೇರಿಕೊಂಡು ದಂಧೆ ನಡೆಸುತ್ತಿದ್ದ. ಇದೇ ಆರೋಪಿಗಳು ಶ್ರೀಕೃಷ್ಣನ ಮೂಲಕ ಡಾರ್ಕ್ ವೆಬ್ನಲ್ಲಿ ಹೈಡ್ರೋ ಗಾಂಜಾ ತರಿಸಿಕೊಂಡು ಬಿಟ್ ಕಾಯಿನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ಸಂಜಯನಗರ, ಚಿಕ್ಕಮಗಳೂರು ,ದೇವನಹಳ್ಳಿ ಸೇರಿದಂತೆ ಹಲವು ಪ್ಲ್ಯಾಟ್ಗಳಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು.
2019ರ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ವೆಬ್ಸೈಟ್ ಹ್ಯಾಕ್ ಮಾಡಿದ್ದ. ಇಷ್ಟೇ ಅಲ್ಲದೆ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿಸಿ ದತ್ತಾಂಶ ಕದ್ದು ಮಾಲೀಕರಿಗೆ ಬೆದರಿಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.