ಕರ್ನಾಟಕ

karnataka

ETV Bharat / state

ಆರೋಪ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದಲ್ಲಿ ಆರೋಪಿ ದೋಷ ಮುಕ್ತ ಎಂದು ಹೇಳಲಾಗದು: ಹೈಕೋರ್ಟ್​

ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಆರೋಪಿ ದೋಷ ಮುಕ್ತನಲ್ಲ ಎಂದು ​ಹೈಕೋರ್ಟ್​ ಅಭಿಪ್ರಾಯಿಸಿದೆ.

HC
ಹೈಕೋರ್ಟ್​

By

Published : Nov 22, 2022, 11:03 PM IST

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಧಾರಗಳಿಲ್ಲ ಎಂದು ತಿಳಿಸಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ನ್ಯಾಯಾಲಯದ ಅಂಗೀಕಾರಕ್ಕೆ ಬಾಕಿಯಿರುವಾಗ ಆರೋಪಿತರು ಪ್ರಕರಣದಿಂದ ದೋಷಮುಕ್ತನಾಗಿದ್ದಾರೆ ಎಂದರ್ಥವಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಸೂಚನೆ ಪ್ರಶ್ನಿಸಿ ಮೈಸೂರು ನಿವಾಸಿ ಕಾಜಲ್ ನರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ.

ಪಾಸ್‌ಪೋರ್ಟ್ ಕಾಯ್ದೆ-1967ರ ಸೆಕ್ಷನ್ 6(2)(ಎಫ್) ಪ್ರಕಾರ, ಕ್ರಿಮಿನಲ್ ಆರೋಪ ಹೊತ್ತಿರುವವರ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗ ಆರೋಪಿತರಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯನ್ನು ನಿರಾಕರಿಸುವ ಅಧಿಕಾರ ಪಾರ್ಸ್‌ಪೋಟ್ ಪ್ರಾಧಿಕಾರ ಹೊಂದಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅರ್ಜಿದಾರರಿಗೆ ಪಾಸ್‌ಪೋರ್ಟ್ ಮರು ವಿತರಣೆ ಮಾಡಿದ್ದರು. ಪೊಲೀಸ್​ ತಪಾಸಣೆ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಅದನ್ನು ಅವರು ಮರೆಮಾಚಿರುವ ಸಂಗತಿ ಬೆಳಕಿಗೆ ಬಂದಿತ್ತು.

ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರ ಮುಚ್ಚಿಟ್ಟು ಪಾರ್ಸ್‌ಪೋರ್ಟ್ ಪಡೆದಿದ್ದಾರೆ. ಹಾಗಾಗಿ, ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ನೀಡಬೇಕು ಎಂದು ಆರ್‌ಪಿಒ ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾಜಲ್ ನರೇಶ್ ಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪಾರ್ಸ್‌ಪೋರ್ಟ್ ಕಾಯ್ದೆ ಸೆಕ್ಷನ್ 12(ಬಿ) ಪ್ರಕಾರ ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಪಾಸ್‌ಪೋರ್ಟ್ ಶರಣಾಗತಿ ಮಾಡಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಅನ್ವಯವಾಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಪಾಸ್‌ಪೋರ್ಟ್ ಅವಧಿ ಮುಗಿದ ಕಾರಣ ಮರು ವಿತರಣೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಕಾಯ್ದೆಯ ನಿಯಮಗಳ ಪ್ರಕಾರ, ಅಪರಾಧ ಪ್ರಕರಣಗಳಿಂದ ಮುಕ್ತರಾಗಿರಬೇಕು. ಬಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಅಪರಾಧದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕು. ಬಿ ರಿಫೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.

ಈ ಅಂಶವನ್ನು ಪರಿಗಣಿಸಿದ ನ್ಯಾಯಾಪೀಠ, ಅರ್ಜಿದಾರರಿಗೆ ಪಾರ್ಸ್ ಪೋರ್ಟ್​ನ್ನು ಮರು ವಿತರಣೆ ಮಾಡಲಾಗಿದೆ. ಮರು ವಿತರಣೆಗೆ ಕೋರಿದಾಗ ಅರ್ಜಿದಾರರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರವನ್ನು ಮುಚ್ಚಿಟ್ಟಿದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸಲ್ಲಿಸಿರುವ ಬಿ ರಿಫೋರ್ಟ್​ನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬೇಕಿದೆ.

ಹಾಗಾಗಿ, ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್​ನ್ನು ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ:ಸಿಎಂ ಅಮೃತ ನಗರೋತ್ಥಾನ ಯೋಜನೆಯಲ್ಲಿಅನ್ಯಾಯ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ABOUT THE AUTHOR

...view details