ಬೆಂಗಳೂರು:ದರೋಡೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿಸಲ್ಪಟ್ಟಿದ್ದಆರೋಪಿಯೊಬ್ಬ ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಆರೋಪಿ ಸಾವು ಸಹಜ ಸಾವಲ್ಲ, ಇದು ಲಾಕಪ್ ಡೆತ್ ಆಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಾಟನ್ ಪೇಟೆಯ ಭಕ್ಷಿ ಗಾರ್ಡನ್ ನಿವಾಸಿಯಾಗಿದ್ದ 23 ವರ್ಷದ ಆರೋಪಿ ವಿನೋದ್ ಪೈಂಟಿಂಗ್ ಸೇರಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದನು. ಈತ 17 ವರ್ಷದವನಾಗಿದ್ದಾಗಲೇ ಕಾಟನ್ ಪೇಟೆ ಪೊಲೀಸರು, ಈತನನ್ನು ದರೋಡೆಗೆ ಸಂಚು ರೂಪಿಸಿದ ಆರೋಪದಡಿ ನಾಲ್ಕನೇ ಆರೋಪಿಯಾಗಿ ಬಂಧಿಸಿದ್ದರು. ವಿನೋದ್ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದನು. ಜಾಮೀನಿನಲ್ಲಿ ಹೊರಗೆ ಇದ್ದ ಈತನಿಗೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಹಾಜರಾಗದೇ ತಲೆಮರೆಸಿಕೊಂಡಿದ್ದನಂತೆ.
ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ವಿನೋದ್ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸುವಂತೆ ಕೋರ್ಟ್ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಕೋರ್ಟ್ ಆದೇಶದಂತೆ ಬುಧವಾರದಂದರು ಸಂಜೆ ಕಾಟನ್ ಪೇಟೆ ಪೊಲೀಸರು ವಿನೋದ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ನಸುಕಿನ ಜಾವ 3.45 ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿನೋದ್ ನನ್ನು ಠಾಣಾ ಸಿಬ್ಬಂದಿ ನೋಡಿದ್ದಾರೆ. ಆ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಯನ್ನು ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಆದಾಗಲೇ ವಿನೋದ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.