ಬೆಂಗಳೂರು: ಹಾವೇರಿ ನಗರಸಭೆಯ ವಿವಿಧ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಕೊಟ್ಯಂತರ ರೂ ನಷ್ಟಕ್ಕೆ ಕಾರಣವಾಗಿದ್ದ ಆರೋಪದಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.
ಆರೋಪದ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿ ಇತ್ತೀಚೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ನೆಹರು ಓಲೇಕಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆರ್.ಸ್ವರೂಪ ಆನಂದ್ ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ದೂರು ದಾಖಲಿಸಲು ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನಮತಿ ಪಡೆದಿಲ್ಲ. ಪೂರ್ವಾನುಮತಿ ಪಡೆಯದೇ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿ ಅರ್ಜಿದಾರರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ನಿಯಮ ಬಾಹಿರವಾಗಿದೆ.
ಅಲ್ಲದೇ ಪ್ರಕರಣದ ಇತರೆ ಆರೋಪಗಳ ಜೊತೆಗೆ ಅರ್ಜಿದಾರ ಶಾಸಕರು ಅಪರಾಧಿಕ ಒಳಸಂಚು ರೂಪಿಸಿರುವ ಸಂಬಂಧ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಅರ್ಜಿದಾರರನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯದ ಹೊರಡಿಸಿದ ಆದೇಶ ಅಮಾನತ್ತಿನಲ್ಲಿರಿಸಬೇಕು. ಜತೆಗೆ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಈ ಅಂಶವನ್ನು ಪುರಸ್ಕರಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಿ ನೆಹರು ಓಲೇಕಾರ್ಗೆ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ ಏನು ?:2008-13ರ ವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ನೆಹರು ಓಲೇಕಾರ್ ಅವರು ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಕುಟುಂಸ್ಥರಿಗೆ ಗುತ್ತಿಗೆ ಕೊಡಿಸಿದ್ದರು. ಐದು ಕಾಮಗಾರಿಗಳನ್ನು ನಡೆಸದಿದ್ದರೂ, ಕಾಮಗಾರಿಗಳು ನಡೆದಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಒಟ್ಟು 5.35 ಕೋಟಿ ರೂ. ಪಡೆದು ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಜತೆಗೆ, ಪುತ್ರರಿಗೇ ಗುತ್ತಿಗೆ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಪ್ರಕರಣದಲ್ಲಿ ಇತರ ಆರೋಪಿಗಳ ಜೊತೆಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ್ ಮಹದೇವಪ್ಪ ಹಳ್ಳಿಕೆರೆ ಹಾವೇರಿಯ ಲೋಕಾಯುಕ್ತ ಕೊರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದರು
ದೂರಿನ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ನಂತರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣವನ್ನು ಸುಧೀರ್ಘ ಕಾಲ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವೂ ನೆಹರು ಓಲೇಕಾರ್, ಅವರ ಪುತ್ರರಾದ ಮಂಜುನಾಥ್ ಓಲೇಕಾರ್, ದೇವರಾಜ್ ಓಲೇಕಾರ್ ನಿವೃತ್ತ ಅಧಿಕಾರಿಗಳಾದ ಎಚ್.ಕೆ. ರುದ್ರಪ್ಪ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿಯಲ್ಲಿ ದೋಷಿಯಾಗಿ ತೀರ್ಮಾನಿಸಿ 2023ರ ಫೆ.13ರಂದು ಆದೇಶಿಸಿತ್ತು.
ಅಲ್ಲದೆ, ಆರೋಪಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಧಿ ಮುಗಿಯವರೆಗೂ ತನ್ನ ಆದೇಶವನ್ನು ಅಮಾನತ್ತಿನಲ್ಲಿರಿಸಿ ನ್ಯಾಯಾಲಯವು ಆದೇಶಿಸಿತ್ತು. ಜತೆಗೆ, ಜಾಮೀನು ಮಂಜೂರು ಮಾಡಿತ್ತು. ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದನ್ನೂಓದಿ:ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ