ಆನೇಕಲ್: ಕೊರೊನಾ ಹಿನ್ನೆಲೆ ಕೆಲವರು ಸ್ವಗ್ರಾಮಕ್ಕೆ ಮರಳಿದ್ದರು. ನಿಲ್ಲಲು ನೆಲೆಯಿಲ್ಲದೆ ಇದ್ದುದರಿಂದ ಗ್ರಾಮ ಪಂಚಾಯತ್ ಅನುದಾನದಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದರು. ಆದ್ರೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದು, ಪದೇ ಪದೆ ಬೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಡ ಜನರಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ ಆರೋಪ ಆನೇಕಲ್ ತಾಲೂಕಿನ ಬ್ಯಾಲಮರ ದೊಡ್ಡಿ ಗ್ರಾಮದಲ್ಲಿ ಕಳೆದ 70 ವರ್ಷಗಳಿಂದ ನೆಲೆಸಿರುವ ಮಂಜುನಾಥ್ ಕುಟುಂಬ ಇದೀಗ ಅರಣ್ಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಹೋಗಿದೆ. ಮಂಜುನಾಥ್ ಕುಟುಂಬದಲ್ಲಿ ಅವರ ತಾಯಿ ಹೊರತುಪಡಿಸಿ ಉಳಿದವರೆಲ್ಲ ತುತ್ತು ಅನ್ನಕ್ಕಾಗಿ ಕೂಲಿಯನ್ನರಸಿ ಬೇರೆಡೆ ವಲಸೆ ಹೋಗುವವರೇ. ಆದ್ರೆ ಈಗ ಕೊರೊನಾ ಹಿನ್ನೆಲೆ ಕೈಯಲ್ಲಿ ಕೆಲಸವಿಲ್ಲದೇ ಸ್ವಗ್ರಾಮಕ್ಕೆ ಮರಳಿದರೆ ನಿಲ್ಲಲು ನೆಲೆ ಬೇರೆ ಇಲ್ಲ. ಪುಟ್ಟ ಗುಡಿಸಿಲಿನಲ್ಲಿ ಇಡೀ ಕುಟುಂಬ ವಾಸಿಸಲು ಅಸಾಧ್ಯ. ಹಾಗಾಗಿ ಗ್ರಾಮ ಪಂಚಾಯತ್ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಮಂಜುನಾಥ್ ಕುಟುಂಬ ಮುಂದಾಗಿತ್ತು.
ತಳಪಾಯ ಹಾಕಿ ಐದಾರು ಅಡಿ ಗೋಡೆ ನಿರ್ಮಿಸಿತ್ತು. ಆದ್ರೆ ಇದೀಗ ಅರಣ್ಯ ಅಧಿಕಾರಿಗಳು ಮನೆ ನಿರ್ಮಿಸಬಾರದು. ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ನಿರ್ಮಾಣ ಹಂತದ ಮನೆಯನ್ನು ನೆಲಸಮ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಮಂಜುನಾಥ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ!
ಸಂವಿಧಾನಬದ್ಧವಾಗಿ ನೀಡಿರುವ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಮಾತ್ರ ಅನಗತ್ಯವಾಗಿ ಗ್ರಾಮ ವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಈ ಭಾಗದ ಶಾಸಕರು ಮತ್ತು ಸಂಸದರ ಗಮನಕ್ಕೆ ತಂದಿದ್ದು, ಅವರು ಬಡವರಿಗೆ ತೊಂದರೆ ಕೊಡಬೇಡಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬಡಪಾಯಿ ಗ್ರಾಮ ವಾಸಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯ ವಾಸಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.