ಆರೋಪಿ ಸೆರೆ ಬಗ್ಗೆ ಸಿಸಿಬಿ ಜಂಟಿ ಆಯುಕ್ತರ ಮಾಹಿತಿ ಬೆಂಗಳೂರು: ಸಾರ್ವಜನಿಕರಿಗೆ ಕೋಟಿಗಟ್ಟಲೆ ರೂಪಾಯಿ ವಂಚಿಸಿ, ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 108 ಕ್ರಿಮಿನಲ್ ಪ್ರಕರಣಗಳ ಆರೋಪಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಅಶ್ವಾಕ್ ಅಹಮದ್ ಬಂಧಿತ ಆರೋಪಿ.
2009- 2010 ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಹೆಸರಿನ ಸಂಸ್ಥೆ ತೆರೆದಿದ್ದ ಆರೋಪಿ ಅಶ್ವಾಕ್ ಅಹಮದ್, ಹೊಸಕೋಟೆ ಬಳಿ ಕೃಷಿ ಜಮೀನುಗಳನ್ನು ಅಕ್ರಮವಾಗಿ ರೆವಿನ್ಯೂ ನಿವೇಶನಗಳು ಎಂದು ಮೋಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿದ್ದನು. ಆರೋಪಿಯ ವಿರುದ್ಧ ರಾಮಮೂರ್ತಿ ನಗರ, ಇಂದಿರಾ ನಗರ ಮತ್ತು ಆಶೋಕ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 108 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಬಳಿಕ ಪ್ರಕರಣದ ತನಿಖೆಯನ್ನು ಆರಂಭಿಸಿದ್ದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಲ್ಯಾಂಡ್ ರೆವಿನ್ಯೂ ಆ್ಯಕ್ಟ್ ಪ್ರಕಾರ ಆತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. 2016 ರಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಆರೋಪಿ ಆಶ್ವಾಕ್ ಅಹಮದ್ ನನ್ನು ಸಿಸಿಬಿಯ ವಿಶೇಷ ವಿಚಾರಣಾ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ಉದ್ಘೋಷಿತ ಆರೋಪಿಯಾಗಿರುವ ಆರೋಪಿಯ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಸಿಬಿ ಜಂಟಿ ಆಯುಕ್ತ ಡಾ ಎಸ್ ಡಿ ಶರಣಪ್ಪ ಮಾಧ್ಯಮದ ಜೊತೆ ಮಾತನಾಡಿ, ಸಿಸಿಬಿ ವತಿಯಿಂದ ಅಬ್ಸ್ಕಾಂಡ್ ವಾರೆಂಟೀಸ್ ಅಥವಾ ಉದ್ಘೋಷಿತ ಆರೋಪಿ ಹಾಗೂ ಸುಮಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇರುವಂತಹವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಈಗಾಗಲೇ ನಾವು ಸುಮಾರು 25 ರಿಂದ 30 ಜಾಮೀನುರಹಿತ ವಾರೆಂಟ್ ಬಾಕಿ ಇರುವವರನ್ನು ವಶಕ್ಕೆ ಪಡೆದುಕೊಂಡು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ. ಸುಮಾರು 13 ವರ್ಷಗಳ ಹಿಂದೆ ಮೂರು ಪೊಲೀಸ್ ಠಾಣೆಗಳಲ್ಲಿ ಒಬ್ಬ ಆರೋಪಿ ಮೇಲೆ ಒಟ್ಟು 108 ಪ್ರಕರಣಗಳು ದಾಖಲಾಗಿತ್ತು.
ಆವಾಗ ಈ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಈ ಆರೋಪಿಒಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಆತ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣ ಆತನ ಮೇಲೆ ಸಮ್ಮನ್ಸ್, ವಾರೆಂಟ್, ಬೈಲೇಬಲ್ ವಾರೆಂಟ್, ಜಾಮೀನು ರಹಿತ ವಾರೆಂಟ್ ಎಲ್ಲವೂ ಆಗಿ, ಆತನ ಪತ್ತೆಯಾಗದ ಕಾರಣ ಆತನನ್ನು ಉದ್ಘೋಷಿತ ಆರೋಪಿ ಎಂದು ಘೋಷಣೆ ಮಾಡಲಾಗಿತ್ತು. ಪ್ರಕರಣಗಳ ವಿಚಾರಣೆ ಎಲ್ಲಾ ತಡೆಯಾಗಿತ್ತು, ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚನೆ ಮಾಡಿ, ನಿರಂತರ ಕಾರ್ಯಾಚರಣೆ ಮಾಡಿ, ಆರೋಪಿಯನ್ನು ಬಂಧಿಸುವಲ್ಲಿ ತಮ್ಮ ತಂಡ ಯಶಸ್ವಿಯಾಗಿದೆ. ಈತನನ್ನು ನಿನ್ನೆ ನಮ್ಮ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈತನ ಮೇಲೆ 108 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಕಳೆದ ಸುಮಾರು 6-7 ವರ್ಷಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸೈಟು ಮಾರಾಟಕ್ಕಿದೆ ಎಂದು ಬೋರ್ಡ್ ಹಾಕುವ ಮುನ್ನ ಹುಷಾರ್.. ಈ ನಕಲಿ ಸೃಷ್ಟಿಕರ್ತನ ಕಣ್ಣಿಗೆ ಬಿದ್ರೆ ಅಷ್ಟೇ!
ಮಾದಕ ದಂಧೆ:ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡರಾತ್ರಿ ಕೊತ್ತನೂರು ಠಾಣಾ ವ್ಯಾಪ್ತಿಯ ದೊಡ್ಡಗುಪ್ಪಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕನ್ ಪ್ರಜೆಗಳು ಸಹಿತ ಎಂಟು ಜನರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿರ್ಜನ ಪ್ರದೇಶಗಳನ್ನು ಮಾದಕ ದಂಧೆಯ ಹಾಟ್ ಸ್ಪಾಟ್ ಗಳನ್ನಾಗಿಸಿಕೊಳ್ಳುತ್ತಿದ್ದ ದಂಧೆಕೋರರು, ಫೋನ್ ಸಂಪರ್ಕದ ಮೂಲಕ ಗಿರಾಕಿಗಳನ್ನು ಸಂಪಾದಿಸಿಕೊಂಡು ಆನ್‌ಲೈನ್‌ನಲ್ಲಿ ಹಣ ಸ್ವೀಕರಿಸುತ್ತಿದ್ದರು. ಬಳಿಕ ನಿರ್ಜನ ಪ್ರದೇಶಗಳಲ್ಲಿ ಮಾದಕ ಪದಾರ್ಥ ಇರಿಸಿ ಗಿರಾಕಿಗಳಿಗೆ ಲೊಕೇಶನ್ ರವಾನಿಸುತ್ತಿದ್ದರು. ಇದರಿಂದ ದಂಧೆಕೋರ ಮತ್ತು ಗಿರಾಕಿಗಳಿಗೆ ನೇರ ಸಂಪರ್ಕವೇ ಇರುವುದಿಲ್ಲ. ಆದರೆ ಏರಿಯಾದ ನಿರ್ಜನ ಪ್ರದೇಶಗಳಲ್ಲಿ ನಡೆಯುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹಲವು ದಿನಗಳಿಂದ ನಿಗಾವಹಿಸಿದ್ದ ಸ್ಥಳೀಯರು ತಡರಾತ್ರಿ ಎಂಟು ಜನ ಆರೋಪಿಗಳನ್ನು ತಾವೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊತ್ತನೂರು ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ