ಬೆಂಗಳೂರು:ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಪತ್ನಿಯನ್ನು ಮುಗಿಸಲು ಸುಪಾರಿ ನೀಡಿದ ಆರೋಪದಡಿ ಪತಿ ಸೇರಿದಂತೆ ನಾಲ್ವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಾರ್ಥ್ ಹೊಸಮನಿ ಎಂಬಾತನೇ ಬಂಧಿತ ಪ್ರಮುಖ ಆರೋಪಿಯಾಗಿದ್ದು, ಪತ್ನಿ ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ.
ಸಿದ್ದಾರ್ಥ್ ಪರಿಚಯಸ್ಥರಾದ ಯೋಗೇಶ್, ರಂಜಿತ್ ಹಾಗೂ ಬ್ಯಾಟರಾಯನಪುರ ರೌಡಿಶೀಟರ್ ಬೆಟ್ಟಪ್ಪ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿ ಮಲ್ಲೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡನೇ ಮದುವೆ:ವಿಮೆ ಮಲ್ಲೇಶ್ವರ ನಿವಾಸಿಯಾಗಿರುವ ಸಿದ್ದಾರ್ಥ್ ಮೂಲತಃ ವಿಮಾ ಏಜೆಂಟ್ ಆಗಿದ್ದ. ಕಳೆದ ಹತ್ತು ವರ್ಷಗಳ ಹಿಂದೆ ಶಾಲಿನಿ ಎಂಬುವರೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದ. ಶಾಲಿನಿಗೂ ಇದು ಎರಡನೇ ಮದುವೆಯಾಗಿತ್ತು. ಮದುವೆಗೂ ಮುನ್ನ ಶಾಲಿನಿ ಹಾಗೂ ಗಂಡನಿಗೂ ವಿಮೆ ಮಾಡಿಸಿದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಪತಿ ಮೃತಪಟ್ಟಿದ್ದ. ವಿಮಾ ಕಂಪನಿಯಿಂದ ಶಾಲಿನಿಗೆ ವಿಮೆ ಹಣ ಕೊಡಿಸಿದ್ದ. ಈ ಪರಿಚಯ ಆತ್ಮೀಯತೆಗೆ ತಿರುಗಿ ಇಬ್ಬರು ಮದುವೆ ಮಾಡಿಕೊಂಡಿದ್ದರು.
ಮಗುವಿಗಾಗಿ ಜಗಳ:ಬಳಿಕ ದಂಪತಿಗೆ ಗಂಡು ಮಗುವಾಗಿದೆ. ಮತ್ತೊಂದೆಡೆ ಮೊದಲನೇ ಪತ್ನಿಯ ಜೊತೆಯೂ ವಾಸವಾಗಿದ್ದ ಸಿದ್ದಾರ್ಥ್ಗೆ ಎರಡು ಮಕ್ಕಳಿದ್ದಾರೆ. ಮೊದಲ ಪತ್ನಿಯ ಸಹೋದರಿಗೆ ಮಕ್ಕಳಿಲ್ಲದ ಕಾರಣ ಎರಡನೇ ಪತ್ನಿಯ ಮಗುವನ್ನೇ ನೀಡಿದ್ದ. ಈ ವಿಷಯ ತಿಳಿಯದ ಶಾಲಿನಿ ತನ್ನ ಮಗುವನ್ನು ಒಪ್ಪಿಸುವಂತೆ ಹಲವು ವರ್ಷಗಳಿಂದ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಈ ಸಂಬಂಧ ಬಂಧಿತನಾಗಿ ಜೈಲು ಸೇರಿ ಹೊರಬಂದಿದ್ದ. ವಿಚಾರಣೆಗೆ ಕೋರ್ಟ್ನಿಂದ ನೋಟಿಸ್ ನೀಡಲಾಗಿತ್ತು. ಮಗು ವಿಚಾರವಾಗಿ ಪತ್ನಿಯಿಂದ ಒತ್ತಾಯ ಹೆಚ್ಚಾಗಿತ್ತು. ಇದರಿಂದ ಅಸಮಾಧಾಗೊಂಡಿದ್ದ ಸಿದ್ದಾರ್ಥ್ ಪತ್ನಿಯನ್ನ ಅಪಹರಿಸಿ ಕೊಲೆ ಮಾಡುವ ಯೋಜನೆ ರೂಪಿಸಿದ್ದ.