ದೇವನಹಳ್ಳಿ: ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ. ನೇಪಾಳ ಮೂಲದ ಉತ್ತಮ್ ಹಮಾಲ್ ಎಂಬುವವನು ಬಂಧಿತ ಆರೋಪಿ ಎಂಬುದು ತಿಳಿದುಬಂದಿದೆ.
ಅಂದಹಾಗೆ ಬಂಧಿತ ಉತ್ತಮ್ ಹಮಾಲ್ ಬೆಂಗಳೂರಿನಿಂದ ಬ್ಯಾಂಕಾಕ್ಗೆ ತೆರಳುತ್ತಿದ್ದ. ನೇಪಾಳ ಮೂಲದವನಾಗಿದ್ರು ಕೇರಳ ಮೂಲದವನು ಎಂದು ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ. ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಬ್ಯಾಂಕಾಕ್ ಗೆ ಹಾರಲು ಯತ್ನ ನಡೆಸಿದ್ದ. ಆದರೆ, ಅನುಮಾನ ಬಂದು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಏರ್ಪೋಟ್ ಪೊಲೀಸರ ವಶಕ್ಕೆ ನೀಡಿದ್ದಾರೆ.
ಇನ್ನು ತನ್ನ ಜೊತೆಯಲ್ಲಿ ಮತ್ತಿಬ್ಬರಿಗೆ ಕೆಲಸ ಕೊಡಿಸುವುದಾಗಿ ಬಂಧಿತ ಆರೋಪಿ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಭಾರತ ಮೂಲದ ಮಹಿಳೆ ಹಾಗೂ ನೇಪಾಳಿ ಮೂಲದ ಮಹಿಳೆ ಜೊತೆ ಆರೋಪಿ ತೆರಳುತ್ತಿದ್ದ ಎಂಬುದು ತಿಳಿದುಬಂದಿದೆ. ತಲಾ ಒಬ್ಬೊಬ್ಬರಿಂದ 08 ಲಕ್ಷ ಹಾಗೂ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ಗೆ ತೆರಳಲು ಯತ್ನಿಸಿದ ವೇಳೆ ಬಂಧಿಸಲಾಗಿದೆ. ಆರೋಪಿಯನ್ನ ಬಂಧಿಸಿ ಮತ್ತಿಬ್ಬರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ : ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದ ಪೊಲೀಸರು 9 ಮಂದಿ ಆರೋಪಿಗಳನ್ನು (ಫೆಬ್ರವರಿ 1-2023) ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಗುಜರಾತ್ ಮೂಲದ ಶಿಬು ಬಂಧಿತ ಆರೋಪಿ ಎಂದು ತಿಳಿದುಬಂದಿತ್ತು.
ವಾಮಮಾರ್ಗದಲ್ಲಿ ಪಾಸ್ ಪೋರ್ಟ್: ಆರೋಪಿ ಹಲವು ವರ್ಷಗಳಿಂದ ಶೀಲಂಕಾ ಸೇರಿ ಕೆಲ ದೇಶಗಳ ಏಜೆಂಟ್ಗಳೊಂದಿಗೆ ಸಂಪರ್ಕ ಸಾಧಿಸಿ ವಿದೇಶಿಯರಿಗೆ ವಾಮಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸುತ್ತಿದ್ದ. ಫ್ರಾನ್ಸ್ನಲ್ಲಿ ಕೆಲ ಕಾಲ ಶೆಫ್ ಆಗಿ ಕೆಲಸ ಮಾಡುವಾಗ ಶ್ರೀಲಂಕಾ ಮೂಲದ ಮಧ್ಯವರ್ತಿಯನ್ನು ಪರಿಚಯಸಿಕೊಂಡಿದ್ದನಂತೆ. ಅಲ್ಲಿನ ಪ್ರಜೆಗಳನ್ನು ಸಂಪರ್ಕಿಸಿ ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುವ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಪ್ರಕರಣದಲ್ಲಿ ಬಂಧಿತನಾಗಿರುವ ಎ1 ಆರೋಪಿ ಅಮಿನ್ ಶೇಟ್ ಎಂಬಾತ ನೀಡಿದ ಸುಳಿವಿನ ಮೇರೆಗೆ ಆರೋಪಿ ಶಿಬುನನ್ನು ಬಂಧಿಸಲಾಗಿತ್ತು. ಶಿಬು ವಿಚಾರಣೆ ವೇಳೆ ಇನ್ನೋರ್ವ ಆರೋಪಿ ಬಗ್ಗೆ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಈವರೆಗೆ 9 ಮಂದಿ ಬಂಧನ : ಆಧಾರ್ ಕಾರ್ಡ್, ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸೇರಿದಂತೆ ಇನ್ನಿತರ ದಾಖಲಾತಿಗಳನ್ನ ನಕಲಿಯಾಗಿ ಸೃಷ್ಟಿಸಿ, ಅಪರಾಧ ಹಿನ್ನೆಲೆ ಇರುವ ಆರೋಪಿಗಳು ಹಾಗೂ ವಿದೇಶಿಯರಿಗೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುತ್ತಿದ್ದ ಐವರು ವಿದೇಶಿಯರು ಸೇರಿ 9 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಅಕ್ರಮ ಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ, ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಮಣಿವೇಲು, ಶೀಜು, ವಿಶಾಲ್ ನಾರಾಯಣ್, ಅಮೀನ್ ಸೇಟ್ ಬಂಧಿತ ಆರೋಪಿಗಳು.
ಇದನ್ನೂ ಓದಿ:ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ: ಮತ್ತೋರ್ವ ಕಿಂಗ್ ಪಿನ್ ಅರೆಸ್ಟ್