ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಬೆಂಗಳೂರು:ಅಪಹರಣ ಪ್ರಕರಣವೊಂದನ್ನು ಭೇದಿಸಲು ಹೊರಟಿದ್ದ ಜ್ಞಾನಭಾರತಿ ಠಾಣೆ ಪೊಲೀಸರು ಕಿಡ್ನ್ಯಾಪ್ ಕೇಸ್ ಜೊತೆ ಹತ್ಯೆ ಪ್ರಕರಣವನ್ನ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಹರಣಕ್ಕೆ ಒಳಗಾಗಿದ್ದ ಕಿಶನ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಂಧಿತ ಆರೋಪಿಗಳಾದ ರಾಮಸಂದ್ರ ಗ್ರಾಮದ ಸಂಜಯ್, ವಿಶ್ವೇಶ್ವರಯ್ಯ ಲೇಔಟ್ ಆನಂದ್ ಹಾಗೂ ರಾಯಚೂರು ಮೂಲದ ಹನುಮಂತ ಎಂಬುವರನ್ನ ಬಂಧಿಸಿ 2.4 ಲಕ್ಷ ನಗದು, ಎರಡು ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಗುರುಸಿದ್ದಪ್ಪ ಎಂಬುವರನ್ನ ಅಪಹರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣ ಪತ್ತೆ ಬೇಧಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲೀಕ ಅಂತಾ ನಂಬಿಸಿ ಸಿಬ್ಬಂದಿ ಅಪಹರಣ:ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿದ್ದ ಸಂಜಯ್, ಖಾಸಗಿ ಕಂಪೆನಿಯೊಂದರ ತರಕಾರಿ ಡೆಲಿವರಿ ಮಾಡುತ್ತಿದ್ದ ಆನಂದ್ ಹಾಗೂ ಹನುಮಂತ ಸೇರಿದಂತೆ ಹಣಕ್ಕಾಗಿ ಅಪಹರಿಸಲು ನಿರ್ಧರಿಸಿದ ಆರೋಪಿಗಳು, ಇಂಟಿರಿಯಲ್ ಕಂಪೆನಿಯೊಂದರ ಮಾಲೀಕ ಸಂಜಯ್ ಕುಮಾರ್ ಪಂಡಿತ್ ಅವರಿಗೆ ಕೆಲಸದ ವಿಷಯವಾಗಿ ಮಾತನಾಡಬೇಕೆಂದು ಗ್ರಾಹಕರ ಸೋಗಿನಲ್ಲಿ ಕರೆ ಮಾಡಿದ್ದಾರೆ. ಮಾಲೀಕ ಕುಂದಾಪುರದಲ್ಲಿ ಇದ್ದ ಕಾರಣ ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶನ್ ಕುಮಾರ್ ಎಂಬುವವರನ್ನ ಆರೋಪಿಗಳು ಸೂಚಿಸಿದ ಸ್ಥಳಕ್ಕೆ ಕಳುಹಿಸಿದ್ದರು.
ಕಿಶನ್ ನನ್ನ ಕಂಡು ಕಂಪನಿ ಮಾಲೀಕ ಈತನೇ ಇರಬಹುದು ಎಂದು ಭಾವಿಸಿ, ಕಾರಿನಲ್ಲಿ ಕಳೆದ ವರ್ಷ ಡಿಸೆಂಬರ್ 26ರಂದು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಹಣ ಕೊಡುವಂತೆ ಒತ್ತಾಯಿಸಿದಾಗ ಆತ ಕಂಪೆನಿಯ ಮಾಲೀಕನಲ್ಲ ಎಂಬುವುದು ಗೊತ್ತಾಗಿದೆ. ನಂತರ ಕಿಶನ್ ಮೂಲಕ ಕರೆ ಮಾಡಿಸಿದಾಗ ತಾನು ಕುಂದಾಪುರದಲ್ಲಿ ಇರುವುದಾಗಿ ಮಾಲೀಕ ತಿಳಿಸಿದ್ದರು. ಕಾರಿನ ಮೂಲಕ ಕುಂದಾಪುರಕ್ಕೆ ತೆರಳಿ ಕರೆ ಮಾಡಿದಾಗ, ನಾನು ಕುಂದಾಪುರದಿಂದ ಬೆಂಗಳೂರಿಗೆ ಬಂದಿರುವುದಾಗಿ ಮಾಲೀಕ ಸಂಜಯ್ ಕುಮಾರ್ ತಿಳಿಸಿದ್ದರು. ಶತಾಯಗತಾಯ ಹಣ ಪಡೆಯಲು ಬೆಂಗಳೂರಿಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ಅಪಹರಣಕಾರರಿಂದ ಕಿಶನ್ ತಪ್ಪಿಸಿಕೊಂಡಿದ್ದರು. ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅಪಹರಣಕಾರರ ವಿರುದ್ಧ ಜನವರಿ 2ರಂದು ಪ್ರಕರಣ ದಾಖಲಾಗಿತ್ತು.
ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ತಮ್ಮ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಕ್ಕೆ ಲಿಂಕ್ ಆಗಿದೆ. ಡಿಸೆಂಬರ್ 30 ರಂದು ಮಹಿಳೆಯೊಬ್ಬರು ತನ್ನ ಪತಿ ಗುರುಸಿದ್ಧಪ್ಪ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಗುರುಸಿದ್ದಪ್ಪ ಪತ್ನಿ ಹಾಗೂ ಅಪಹರಣಕ್ಕೆ ಒಳಗಾಗಿದ್ದ ಕಿಶನ್ ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಎರಡು ಪ್ರಕರಣವನ್ನ ಒಂದೇ ಗ್ಯಾಂಗ್ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇದೇ ಆಯಾಮಾದಲ್ಲಿ ಆಳವಾದ ತನಿಖೆ ನಡೆಸಿದಾಗ ಆರೋಪಿಗಳ ಮೊಬೈಲ್ ಕರೆ ಟ್ರ್ಯಾಕ್ ಮಾಡಿದಾಗ ಗೋವಾ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸುತ್ತಾಡಿ ಕೊನೆಗೆ ನಗರದಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಕೇಳಿದಷ್ಟು ಹಣ ನೀಡಿದರೂ ಹತ್ಯೆ ಮಾಡಿದ್ರು. ಆರೋಪಿ ಸಂಜಯ್ ಗೆ ಮೃತ ಗುರುಸಿದ್ದಪ್ಪ ಪರಿಚಯಸ್ಥನಾಗಿದ್ದ. ದ್ವಿಚಕ್ರ ವಾಹನದ ಬಿಡಿಭಾಗಗಳ ವಿತರಣೆಯ ಆಟೋಮೊಬೈಲ್ಸ್ ಕಂಪನಿಯೊಂದರಲ್ಲಿ ಗುರುಸಿದ್ದಪ್ಪ ಕೆಲಸ ಮಾಡುತ್ತಿದ್ದರು. ಆರೋಪಿಯ ಗ್ಯಾರೇಜ್ನಲ್ಲಿ ಮಾಲೀಕ ತನ್ನ ಬೈಕ್ ಸರ್ವೀಸ್ ಮಾಡಿಸುತ್ತಿದ್ದ. ಆರ್ಥಿಕವಾಗಿ ಶ್ರೀಮಂತನಾಗಿರುವುದಾಗಿ ಭಾವಿಸಿದ್ದ ಸಂಜಯ್, ತನ್ನ ಪಟಾಲಯಂ ಜೊತೆ ಪ್ಲ್ಯಾನ್ ಮಾಡಿದ್ದಾರೆ. ಕಿಶನ್ ಅಪಹರಣದಲ್ಲಿ ಮಾಡಿದ ಲೋಪ ಮತ್ತೆ ಮರುಕಳಿಸಿದಂತೆ ವ್ಯವಸ್ಥಿತ ಸಂಚು ರೂಪಿಸಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿ: ಡಿಸೆಂಬರ್ 30 ರಂದು ಅಂದುಕೊಂಡಂತೆ ಗುರುಸಿದ್ದಪ್ಪನನ್ನ ಅಪಹರಿಸಿದ್ದಾರೆ. ರಾಮನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಗುರುಸಿದ್ಧಪ್ಪನನ್ನ ಬೆದರಿಸಿ ಆತನಿಂದ ಪತ್ನಿಗೆ ಕರೆ ಮಾಡಿಸಿ 4 ಲಕ್ಷ ಹಣವನ್ನ ಹೇಳಿದ ವ್ಯಕ್ತಿಗಳಿಗೆ ನೀಡುವಂತೆ ಸೂಚಿಸಿದ್ದಾರೆ. ಪತಿ ಸೂಚನೆ ಮೇರೆಗೆ ಅಪಹರಣಕಾರರು 4 ಲಕ್ಷ ಹಣ ಪಡೆದುಕೊಂಡಿದ್ದಾರೆ. ಬಿಡುಗಡೆ ಬಳಿಕ ಪೊಲೀಸರಿಗೆ ತಮ್ಮ ಬಗ್ಗೆ ಮಾಹಿತಿ ನೀಡಬಹುದು ಎಂದು ಭಾವಿಸಿದ ಆರೋಪಿಗಳು ಗುರುಸಿದ್ಧಪ್ಪನನ್ನ ಹತ್ಯೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದರು.
ಇತ್ತ ಹಣ ಕೈಗೆ ಸಿಗುತ್ತಿದ್ದಂತೆ ಹೊಸ ವರ್ಷಾಚರಣೆಗಾಗಿ ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ತಿಮ್ಮಪ್ಪ ಸ್ವಾಮಿ ಬೆಟ್ಟದ ಬಳಿ ಪರಿಶೀಲಿಸಿದಾಗ ಶವ ಬಿಸಾಡಿದ ಅರ್ಧ ಕಿಲೋಮೀಟರ್ ದೂರದಲ್ಲಿ ಪಳೆಯುಳಿಕೆ ಸ್ಥಿತಿ ಶವ ಪತ್ತೆಯಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ವಿವರಿಸಿದರು.
ಇದನ್ನೂ ಓದಿ:ಚಿಕ್ಕಮಗಳೂರು: 2 ಗುಂಪಿನ ಯುವಕರ ನಡುವೆ ಬಡಿದಾಟ - ಸಿಸಿಟಿವಿಯಲ್ಲಿ ದೃಶ್ಯ ಸೆರೆ