ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸೂಕ್ತ ದಾಖಲಾತಿ ಇಲ್ಲದೆ ಕಾರ್ನಲ್ಲಿ ಸಾಗಿಸುತ್ತಿದ್ದ ಆಧಾರರಹಿತ ಲಕ್ಷಾಂತರ ರೂಪಾಯಿ ಹಣವನ್ನ ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಊರ್ವಶಿ ಥಿಯೇಟರ್ ಬಳಿ ಕಾರ್ನಲ್ಲಿದ್ದ ಆಧಾರರಹಿತ 49.79 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿದ್ದ ಪವನ್, ಗೋಪಿ ಹಾಗೂ ಮಲ್ಲಿಕಾರ್ಜುನ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಪೊಲೀಸರು ಈಗಾಗಲೇ ತಪಾಸಣೆ ಚುರುಕುಗೊಳಿಸಿದ್ದಾರೆ.
ಈ ಹಿನ್ನೆಲೆ ಹೆಚ್ಚಿನ ಮೊತ್ತದ ಹಣ ತೆಗೆದುಕೊಂಡು ಹೋಗುವಾಗ ಸೂಕ್ತ ದಾಖಲೆ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ದಾಖಲಾತಿ ಇಲ್ಲದಿದ್ದರೆ ಹಣ ಸೀಜ್ ಮಾಡುವುದರ ಜೊತೆಗೆ ಕೇಸ್ ಕೂಡ ದಾಖಲಾಗುತ್ತೆ. ಸದ್ಯ ದಾಖಲೆಗಳು ಇಲ್ಲದೇ ಹಣ ಸಾಗಣೆ ಮಾಡುತ್ತಿದ್ದ ಮೂವರ ವಿರುದ್ಧ ಕೆಪಿ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಿ ಕಲಾಸಿಪಾಳ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಕಾರಿನ ಸೀಟಿನಲ್ಲಿ ಡ್ರಗ್ಸ್ ಇಟ್ಟು ದಂಧೆ:ಇನ್ನೊಂದೆಡೆ ಚಾಮರಾಜನಗರ ಮಲೆಮಹದೇಶ್ವರ ಸಮೀಪದ ಊರಿನಿಂದ ಡ್ರಗ್ಸ್ ತರಿಸಿಕೊಂಡು ಕಾರಿನ ಸೀಟಿನಲ್ಲಿ ಬಚ್ಚಿಟ್ಟುಕೊಂಡು ವ್ಯವಸ್ಥಿತವಾಗಿ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ಲೋಕೇಶ್ ಬಂಧಿತ ಆರೋಪಿ. ಅಲ್ಲದೆ ಪ್ರತ್ಯೇಕ 9 ಪ್ರಕರಣಗಳನ್ನ ಬೇಧಿಸಿರುವ ಸಿಸಿಬಿ ಪೊಲೀಸರು ನಾಲ್ವರು ಆಫ್ರಿಕನ್ ಸೇರಿ ಒಟ್ಟು 13 ಮಂದಿ ದಂಧೆಕೋರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 9 ಡ್ರಗ್ಸ್ ಪ್ರಕರಣಗಳಲ್ಲಿ 13 ಮಂದಿ ಆರೋಪಿಗಳನ್ನು ಒಟ್ಟು ಬಂಧಿಸಿ ಒಂದೂವರೆ ಕೆ.ಜಿ ಮಾದಕ ವಸ್ತು, 41 ಮಾತ್ರೆಗಳು, 25 ಕೆ.ಜಿ ಗಾಂಜಾ, 2 ಕಾರು, ಒಂದು ಬೈಕ್ ಹಾಗೂ 9 ಮೊಬೈಲ್ ಫೋನ್ ಸೇರಿ 2.48 ಮೌಲ್ಯದ ತರಹೇವಾರಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದಾರೆ.