ಬೆಂಗಳೂರು :ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಬೀಗ ಹಾಕಿಕೊಂಡು ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮರ ಗ್ಯಾಂಗ್ 12 ವರ್ಷಗಳ ಬಳಿಕ ದೇವರಜೀವನಹಳ್ಳಿ ಪೊಲೀಸರಿಗೆ ಸಿಕ್ಕಿ ಬಿದ್ದಿದೆ.
12 ವರ್ಷಗಳಿಂದಲೂ ಡಿಜೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರೂ ಸಣ್ಣ ಸುಳಿವು ನೀಡದೆ ಚಾಕಚಕ್ಯತೆ ಮೆರೆದಿದ್ದ ಖದೀಮರಾದ ಮುರುಳಿ, ಶಿವರಾಂ ಹಾಗೂ ಸಿರಾಜ್ ಎಂಬ ಮೂವರನ್ನು ಬಂಧಿಸಿ 11 ಲಕ್ಷ ಮೌಲ್ಯದ 240 ಗ್ರಾಂ. ಮೌಲ್ಯದ ಚಿನ್ನ ಹಾಗೂ ಏಳು ಲಕ್ಷ ರೂಪಾಯಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಹಾಗೆಯೇ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳ್ಳತನ ಪ್ರಕರಣಗಳನ್ನ ಬೇಧಿಸಿರುವ ಕುರಿತಂತೆ ಡಿಸಿಪಿ ಶರಣಪ್ಪ ಮಾತನಾಡಿರುವುದು.. ಕಾವಲ್ ಬೈರಸಂದ್ರ ನಿವಾಸಿಯಾಗಿರುವ ಮುರುಳಿ ಅಲಿಯಾಸ್ ಪ್ರಾಜೆಕ್ಟ್ 7ನೇ ತರಗತಿ ವ್ಯಾಸಂಗ ಮಾಡಿದ್ದರೂ ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ. 2011ರಿಂದಲೂ ನಡೆದ ಮನೆಗಳ್ಳತನ ಕೃತ್ಯಗಳಿಗೆ ಮಾಸ್ಟರ್ ಮೈಂಡ್ ಆಗಿ ಗುರುತಿಸಿಕೊಂಡಿದ್ದ.
ಬೆಳಗ್ಗೆ ಹಾಗೂ ಸಂಜೆ ವೇಳೆ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವ ಅವಧಿಯಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರುತಿಸಿಕೊಳ್ಳುತ್ತಿದ್ದ. ಸಾಮಾನ್ಯವಾಗಿ ಮಕ್ಕಳ ಜೊತೆ ಹೋಗುವಾಗ ಮಹಿಳೆಯರು ಬೀಗದ ಕೀಯನ್ನು ಕೈಯಲ್ಲಿ ಇಟ್ಟುಕೊಳ್ಳುವ ಮಹಿಳೆಯರ ವೀಕ್ನೆಸ್ಗಳನ್ನೆ ಬಂಡವಾಳ ಮಾಡಿಕೊಂಡಿದ್ದ ಅವರು ದೂರದಿಂದಲೇ ಬೀಗದ ಕೀ ಸೈಜಿನ ಗಾತ್ರವನ್ನು ಕಣ್ಣಲ್ಲೇ ಅಳತೆ ಮಾಡುತ್ತಿದ್ದರು.
ಮನೆಯಲ್ಲೇ ಬೀಗದ ಕೀ ತಯಾರಿಸುತ್ತಿದ್ದ ಕಿಲಾಡಿ ಖದೀಮ
ಕಳ್ಳತನ ಮಾಡಲೆಂದೇ ಬೀಗ ತಯಾರಕರ ಬಳಿ ಬೀಗದ ಕೀ ಹೇಗೆ ಮಾಡುವುದೆಂದು ನೋಡಿ ಕಲಿತಿದ್ದ. ಕಳ್ಳತನ ಮಾಡುವ ಮನೆಯ ಕೀಯನ್ನು ನಾಲ್ಕೈದು ಮಾದರಿಯಲ್ಲಿ ನಕಲಿ ಕೀ ಮಾಡಿ ತಯಾರಿಸುತ್ತಿದ್ದ. ಬಳಿಕ ಅಂದುಕೊಂಡಂತೆ ಟಾರ್ಗೆಟ್ ಮಾಡಿಕೊಂಡ ಮನೆಗಳಿಗೆ ಹೋಗಿ ಡೋರ್ಲಾಕ್ ಓಪನ್ ಮಾಡಿ ಸುಲಭವಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಹಲವು ವರ್ಷಗಳಿಂದ ಕೃತ್ಯದಲ್ಲಿ ಭಾಗಿಯಾದರೂ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ಭೀತಿಯಿಂದ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ
ಕಳ್ಳತನ ಕೃತ್ಯಗಳಲ್ಲಿ ಎಸಗುತ್ತಿದ್ದರೂ ತಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ. ಆರಂಭದಲ್ಲಿ ಪತ್ನಿಗೂ ಪತಿಯ ಕೃತ್ಯದ ಬಗ್ಗೆ ಹೇಳಿರಲಿಲ್ಲ. ಯಾವುದೇ ಕಾರಣಕ್ಕೂ ಪೊಲೀಸರಿಗೆ ಸಿಕ್ಕಿಬೀಳಬಾರದಿರಲು ಆಧಾರ್ ಕಾರ್ಡ್ ಸಹ ಮಾಡಿಸಿರಲಿಲ್ಲ. ಆಧಾರ್ ಕಾರ್ಡ್ ಮಾಡಿಸಬೇಕಾದರೆ ಫಿಂಗರ್ ಪ್ರಿಂಟ್ ನೀಡಬೇಕು.
ಒಂದು ವೇಳೆ ಬೆರಳಚ್ಚು ನೀಡಿದರೆ ಪೊಲೀಸರು ತನಿಖೆ ನಡೆಸಿ ಬಂಧಿಸುತ್ತಾರೆ ಎಂಬ ಭೀತಿಯಿಂದ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ. ಕಳ್ಳತನ ಕೃತ್ಯಕ್ಕೆ ಪ್ರಾಜೆಕ್ಟ್ ಎಂದು ಕೋಡ್ವರ್ಡ್ ಬಳಸುತ್ತಿದ್ದರು. ಕದ್ದ ಚಿನ್ನಾಭರಣವನ್ನು ಪರಿಚಯಸ್ಥ ಜ್ಯುವೆಲ್ಲರಿ ಶಾಪ್ಗಳಿಗೆ ಮಾರಾಟ ಮಾಡಿ, ಮೋಜಿನ ಜೀವನ ನಡೆಸುತ್ತಿದ್ದರು ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಓದಿ:ಈ ಒಂದ್ ಸಣ್ಣ ಹಳ್ಳಿಯೊಳಗೆ 600ಕ್ಕೂ ಹೆಚ್ಚು ರಕ್ತದಾನಿಗಳು.. ಇದು ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರೂಪ್..