ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸದೆ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆರೋಪಿಗೆ 5 ವರ್ಷಗಳ ಶಿಕ್ಷೆ ವಿಧಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿರುವ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ವೃತ್ತಿಪರತೆಯ ಕೊರತೆಯಿದ್ದು, ನ್ಯಾಯಾಂಗ ಅಕಾಡೆಮಿಯಿಂದ ತರಬೇತಿ ಪಡೆಯಲು ಸೂಚಿಸಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದ ಪೋಕ್ಸೋ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪೋಕ್ಸೋ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ಆದೇಶ ನೀಡುವ ನ್ಯಾಯಾಧೀಶರಿಗೆ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಿಂದ ತರಬೇತಿ ಪಡೆದುಕೊಳ್ಳುವ ಅಗತ್ಯವಿದ್ದು, ಪ್ರಸ್ತುತ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಅಕಾಡೆಮಿಯಿಂದ ತರಬೇತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.
ಅಲ್ಲದೆ, ಸಂತ್ರಸ್ತೆ ಹಾಗೂ ಆಕೆಯ ಪೋಷಕರು ನುಡಿದಿರುವ ಸಾಕ್ಷ್ಯಗಳು ನಂಬಲಾರ್ಹ ಮತ್ತು ಸತ್ಯಾಂಶವನ್ನಷ್ಟೇ ಒಳಗೊಂಡಿವೆ. ಜತೆಗೆ, ಇತರೆ ಸಂಬಂಧಿಕರ ಸಾಕ್ಷ್ಯಗಳನ್ನೂ ಪರಿಶೀಲಿಸಿದರೆ ಆರೋಪಿ ತಪ್ಪೆಸಗಿದ್ದಾನೆ ಎಂಬ ಅಂಶ ಗೊತ್ತಾಗಲಿದೆ. ಈ ರೀತಿಯ ಪ್ರಕರಣಗಳಲ್ಲಿ ಸಂತ್ರಸ್ತೆ, ಪೋಷಕರು ಮತ್ತು ಸಂಬಂಧಿಕರು ಸಾಕ್ಷ್ಯಗಳನ್ನು ನುಡಿದಿದ್ದರೂ, ವಿಚಾರಣಾ ನ್ಯಾಯಾಲಯ ಸ್ವತಂತ್ರ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷ್ಯ ಸಾಕ್ಷ್ಯಗಳು ಬೇಕು ಎಂದು ಬಯಸಿರುವುದು ಸಾಧ್ಯವಾಗದ ಅಂಶವಾಗಿದೆ. ಪೋಕ್ಸೋ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಸಾಕ್ಷ್ಯಗಳ ವಿಚಾರಣೆ ಸಂದರ್ಭದಲ್ಲಿ ಅತ್ಯಂತ ತಾಂತ್ರಿಕ ದೃಷ್ಠಿಯಿಂದ ಪರಿಗಣಿಸಿದೆ. ಈ ಬೆಳವಣಿಗೆ ಅಮಾನವೀಯ ಮತ್ತು ಸಂಪೂರ್ಣ ತಪ್ಪಾಗಿದೆ ಎಂದು ಪೀಠ ತಿಳಿಸಿದೆ.