ಬೆಂಗಳೂರು:26 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 1997ರಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ದೇವೇಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಆಲೂರಿನ ದೇವೇಗೌಡ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಪತ್ತೆ ಹಚ್ಚಿ ಹಾಜರುಪಡಿಸುವಂತೆ ನ್ಯಾಯಾಲಯ ಅನೇಕ ಬಾರಿ ವಾರೆಂಟ್ ಜಾರಿಗೊಳಿಸಿತ್ತು. ಪೊಲೀಸರು ಹಾಸನ, ಬೆಂಗಳೂರಿನಲ್ಲಿ ಸಾಕಷ್ಟು ಶೋಧ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಇದೀಗ ನ್ಯಾಯಾಲಯದ ಬಳಿಯೇ ಇರುವ ಹೋಟೆಲೊಂದರಲ್ಲಿ ಅಡುಗೆ ಭಟ್ಟನಾಗಿದ್ದ ಆರೋಪಿ ಸೆರೆ ಸಿಕ್ಕಿದ್ದಾನೆ. ಆರೋಪಿಯನ್ನು ನ್ಯಾಯಾಲಯದೆದುರು ಹಾಜರುಪಡಿಸಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.
ಇಂಥದ್ದೇ ಮತ್ತೊಂದು ಪ್ರಕರಣ: ಹುಬ್ಬಳ್ಳಿಯಲ್ಲಿ 28 ವರ್ಷಗಳ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆರೋಪಿಯೊಬ್ಬ ನಂತರ ಜಾಮೀನಿನ ಮೇಲೆ ಹೊರಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪೊಲೀಸರ ಕಣ್ತಪ್ಪಿಸಿ ಗೋವಾದಲ್ಲಿ ಓಡಾಡಿಕೊಂಡಿದ್ದಾತನನ್ನು ಇತ್ತೀಚೆಗೆ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದರು.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ 1995ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದನು. ಹುಬ್ಬಳ್ಳಿ ನಗರದ ತಾರಿಹಾಳ ರಸ್ತೆ ನಿವಾಸಿ ಮಹ್ಮದ್ ಹನೀಫಸಾಬ್ ಹೊಸಮನಿ (57) ತಲೆಮರೆಸಿಕೊಂಡಿದ್ದ ಆರೋಪಿ. ತನ್ನ ಕುಟುಂಬವನ್ನು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಬಿಟ್ಟು ಗೋವಾದ ಹೋಟೆಲ್ ಹಾಗೂ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದನು. ನ್ಯಾಯಾಲಯ ಇದನ್ನು ಎಲ್ಪಿಸಿ ಪ್ರಕರಣವೆಂದು ಪರಿಗಣಿಸಿ ವಾರೆಂಟ್ ಜಾರಿ ಮಾಡಿತ್ತು. ಇತ್ತೀಚೆಗೆ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಹೀಗೊಂದು ಇಂಟರೆಸ್ಟಿಂಗ್ ಸ್ಟೋರಿ:ತಾನು ಸಾವನ್ನಪ್ಪಿರುವುದಾಗಿ ಬಿಂಬಿಸಿಕೊಂಡು, ಎರಡು ವರ್ಷಗಳಿಂದ ತಲೆಮರೆಸಿಕೊಡಿದ್ದ ರೌಡಿಶೀಟರ್ ಒಬ್ಬನನ್ನು ಬೆಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ. ಈತ ರೌಡಿ ಕಾಡುಬೀಸನಹಳ್ಳಿ ಸೋಮನ ಕಾರು ಚಾಲಕನ ಹತ್ಯೆ ಪ್ರಕರಣದಲ್ಲಿ ಹಾಗೂ ರಾಜಾನುಕುಂಟೆ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.
ಈತನ ಬಂಧನಕ್ಕಾಗಿ ಪೊಲೀಸರು ಮನೆ ಬಳಿ ಹೋದಾಗ ಕುಟುಂಬಸ್ಥರು ಹಾಗೂ ಸ್ನೇಹಿತರು ಆತ ಮೃತಪಟ್ಟಿರುವುದಾಗಿ ದಾಖಲೆಗಳನ್ನು ತೋರಿಸಿದ್ದರು. ಹೀಗಿದ್ದರೂ ಅನುಮಾನಗೊಂಡಿದ್ದ ಪೊಲೀಸರು, ತಲೆಮರೆಸಿಕೊಂಡು ಊರೂರು ಸುತ್ತುತ್ತಿದ್ದ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸುವಲ್ಲಿ ವೈಟ್ ಫೀಲ್ಡ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ:28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಂಡಿಗೇರಿ ಪೊಲೀಸರು