ಬೆಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ಮೇಲೆ ಬಸ್ ಹರಿದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಅಟ್ಟೂರಿನ ಮದರ್ ಡೈರಿ ಬಳಿ ದುರಂತ ಸಂಭವಿಸಿದ್ದು, ಅವಘಡದಲ್ಲಿ ಸ್ಕೂಟರ್ ಸವಾರ ಭರತ್ ರೆಡ್ಡಿ ಸಾವನ್ನಪ್ಪಿದ್ದಾರೆ.
ಎಂಜಿನಿಯರಿಂಗ್ ಮುಗಿಸಿದ್ದ ಭರತ್, ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ 5 ಗಂಟೆ ವೇಳೆ ಅಟ್ಟೂರು ಕಡೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದರು. ಕಿರಿದಾದ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವಾಗ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದರು. ಈ ವೇಳೆ, ಬಸ್ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಸವಾರನ ಮೇಲೆ ಬಸ್ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಿಎಂಟಿಸಿ ಚಾಲಕ ಎಸ್ಕೇಪ್ ಆಗಿದ್ದಾನೆ. ಸದ್ಯ ಯಲಹಂಕ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಓವರ್ ಟೇಕ್ ವೇಳೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ಠಾಣಾ ಜಾಮೀನಿನ ಮೇಲೆ ಬಿಡುಗಡೆ- ಡಿಸಿಪಿ
ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಬಳಿಯ ನೈಸ್ ರಸ್ತೆಯ ಸೋಂಪುರ ಕ್ಲೋವರ್ ಲೀಪ್ ಹತ್ತಿರ ಕಾರು ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆ, ಮಗು ಸಜೀವ ದಹನವಾಗಿದ್ದರು. ಮಹಿಳೆಯ ಮತ್ತೋರ್ವ ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಇನ್ನು ಪತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಮೂಲದ ಮಹೇಂದ್ರನ್ ಮತ್ತು ಸಿಂಧು ದಂಪತಿ ತಮ್ಮ ಎರಡು ಮಕ್ಕಳ ಜೊತೆ ಕಾರಿನಲ್ಲಿ ನಾಗಸಂದ್ರಕ್ಕೆ ತೆರಳುವಾಗ ಅಪಘಾತ ಸಂಭವಿಸಿತ್ತು. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಪಘಾತದ ರಭಸಕ್ಕೆ ಲಾರಿ ಪಲ್ಟಿಯಾಗಿತ್ತು.
ಕಳೆದ ತಿಂಗಳು ಬಿಬಿಎಂಪಿ ಕಸದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ನವವಿವಾಹಿತ ಯಶವಂತ್ (26) ಸಾವನ್ನಪ್ಪಿದ್ದ. ಜಯನಗರ ಮೆಟ್ರೋ ನಿಲ್ದಾಣದ ಬಳಿ ರಾತ್ರಿವೇಳೆ ಈ ಘಟನೆ ನಡೆದಿತ್ತು. ಯಶವಂತ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಬನಶಂಕರಿಯಿಂದ ಸೌತ್ ಎಂಡ್ ಸರ್ಕಲ್ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಆಗಮಿಸುವಾಗ ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಯಶವಂತ್ ಡಿಕ್ಕಿ ಹೊಡೆದಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಲಾರಿ - ಕಾರಿನ ಮಧ್ಯೆ ಭೀಕರ ಅಪಘಾತ: ತಾಯಿ - ಮಗು ಸಜೀವ ದಹನ, ತಂದೆ - ಮತ್ತೋರ್ವ ಮಗುವಿಗೆ ಗಂಭೀರ ಗಾಯ