ಬೆಂಗಳೂರು:ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಕಳೆದೊಂದು ತಿಂಗಳಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ನಡುವೆಯೂ, ನಮ್ಮ ಮೆಟ್ರೋ ಕಾಮಗಾರಿ ಚುರುಕು ಪಡೆದುಕೊಂಡಿದೆ. ಹಂತ-2 ರ ಭೂ ಸ್ವಾಧೀನ ಪ್ರಗತಿಯ ಕುರಿತು ಮಾಹಿತಿ ಬಿಡುಗಡೆ ಮಾಡಲಾಗಿದೆ.
ರೀಚ್-1ಇ (ಬೈಯಪ್ಪನಹಳ್ಳಿ - ವೈಟ್ಫೀಲ್ಡ್ವರೆಗೆ 15.05 ಕಿ.ಮೀ)
1,70,362.23 ಚದರ ಮೀಟರ್ ವಿಸ್ತೀರ್ಣದ ಪ್ರದೇಶವು ವಯಾಡಕ್ಟ್ ಮತ್ತು ನಿಲ್ದಾಣಗಳಿಗೆ ಅಗತ್ಯವಾಗಿದ್ದು, ಅದರಲ್ಲಿ 1,64,152.05 ಚದರ ಮೀಟರ್ ಪ್ರದೇಶವನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಕಾಡುಗೋಡಿ ಡಿಪೋಗೆ ಬೇಕಾದ 45 ಎಕರೆ ಅರಣ್ಯ ಭೂಮಿಯನ್ನು ಸಹ ಸ್ವಾದೀನ ಪಡಿಸಿಕೊಳ್ಳಲಾಗಿದ್ದು, ಮರಗಳನ್ನು ಕಡಿಯಲು ಸಹ ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದ ಅನುಮತಿ ಪಡೆಯಲಾಗಿದೆ. ಮರಗಳ ಕಟಾವು/ಸ್ಥಳಾಂತರ ಪ್ರಗತಿಯಲ್ಲಿದೆ.
ರೀಚ್-3ಸಿ (ನಾಗಸಂದ್ರದಿಂದ ಬಿ.ಐ.ಇ.ಸಿ ವರೆಗೆ 3 ಕಿ.ಮೀ)
ಈ ವ್ಯಾಪ್ತಿಗೆ ಬೇಕಾದ ಎಲ್ಲ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಜಿಂದಾಲ್- ಪ್ರೆಸ್ಟೀಜ್ ಲೇಔಟ್ ಮೂಲಕ ಅಂಚೆಪಾಳ್ಯ ಮತ್ತು ಇತರ ಹಳ್ಳಿಗಳಿಂದ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ರಸ್ತೆ ಸಂಪರ್ಕವನ್ನು ಒದಗಿಸಲು 1885,11 ಚದರ ಮೀಟರ್ ಹೆಚ್ಚುವರಿ ಪ್ರದೇಶ ಸ್ವಾಧೀನಪಡಿಸಿಕೊಂಡಿದೆ. ಭೂಸ್ವಾಧೀನವನ್ನು ರದ್ದುಗೊಳಿಸುವಂತೆ ಜಿಂದಾಲ್ ಮತ್ತು ಪ್ರೆಸ್ಟೀಜ್ ಸಂಸ್ಥೆಯವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್‌ನ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ರೀಚ್-6 (ಗೊಟ್ಟಿಗೆರೆಯಿಂದ ಐ.ಐ.ಎಂ.ಬಿ - ನಾಗವಾರದವರೆಗೆ 22 ಕಿ.ಮೀ)
ಗೊಟ್ಟಿಗೆರೆಯಿಂದ ಡೈರಿ ವೃತ್ತದವರೆಗೆ ಎತ್ತರಿಸಿದ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಡೈರಿ ವೃತ್ತದಿಂದ ನಾಗವಾರವರೆಗಿನ ಸುರಂಗ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ಪಾವತಿ ಅಂತಿಮ ಹಂತದಲ್ಲಿದೆ.
ಕೊತ್ತನೂರು ಡಿಪೋಗೆ ಅಗತ್ಯವಿರುವ 32.6 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ವೆಂಕಟೇಶಪುರ ನಿಲ್ದಾಣಕ್ಕೆ 5101,26 ಚದರ ಮೀಟರ್ ಹೆಚ್ಚುವರಿ ತಾಂತ್ರಿಕ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಹಾಗೆಯೇ ಹಂತ-2ಎ (ಹೊರ ವರ್ತುಲ ರಸ್ತೆ ) ಈ ಮಾರ್ಗಕ್ಕೆ ಅಗತ್ಯವಿರುವ 60,25515 ಚದರ ಮೀಟರ್ ವಿಸ್ತೀರ್ಣದ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಹಂತ-2 ಬಿ 38 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದ ವಯಾಡಕ್ಟ್ ಮತ್ತು ನಿಲ್ದಾಣಗಳಿಗೆ ಅಗತ್ಯವಿರುವ 2,20,361.02 ಚದರ ಮೀಟರ್‌ನಲ್ಲಿ ಸಂಪೂರ್ಣ ವ್ಯಾಪ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 1,99,805,78 ಚದರ ಮೀಟರ್ ವ್ಯಾಪ್ತಿಯನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಪ್ರದೇಶಕ್ಕೆ ಪರಿಹಾರ ಪಾವತಿ ಪ್ರಗತಿಯಲ್ಲಿದೆ.
ಹಾಗೆಯೇ ಶೆಟ್ಟಿಗೆರೆಯಲ್ಲಿ ಡಿಪೋಗೆ ಬೇಕಾದ 23 ಎಕರೆ ಭೂಮಿಯಲ್ಲಿ 18 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರ ವರ್ಗಾಯಿಸಿ ಮತ್ತು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಉಳಿದ 5 ಎಕರೆ ಜಮೀನಿಗೆ ಸಂಬಂಧಿಸಿದಂತೆ ಒಂದು ವ್ಯಾಜ್ಯ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಬಳಿ ಬಾಕಿ ಇದೆ ಎಂದು ನಿಗಮ ತಿಳಿಸಿದೆ.
ಪರಿಹಾರ ಧನ ಪಾವತಿ ಮತ್ತು ಪುನರ್ವಸತಿ ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಹಂತ-2 ರಲ್ಲಿ 6467.38 ಕೋಟಿ ಮತ್ತು ಹಂತ-2ಎ ರಲ್ಲಿ ರೂ 365.51 ಕೋಟಿ ಹಾಗೂ ಹಂತ-2ಬಿ ರಲ್ಲಿ ರೂ. 1288.47 ಕೋಟಿ ಪರಿಹಾರಧನವನ್ನು ಒಟ್ಟಾರೆ 3,033 ಸ್ವತ್ತುಗಳಿಗೆ ಪಾವತಿ ಮಾಡಲಾಗಿದೆ. ಪುನರ್ವಸತಿ ಸೌಲಭ್ಯಗಳ ಕುರಿತು 722 ಭೂಮಾಲೀಕರಿಗೆ ಹಾಗೂ 2,315 ಅನುಭವದಾರರಿಗೆ ರೂ. 78.55 ಕೋಟಿ ಹಣ ಪಾವತಿಯಾಗಿದೆ..
ಡೈರಿ ಸರ್ಕಲ್ನಿಂದ ನಾಗವಾರ ಮೆಟ್ರೋ ಕಾಮಗಾರಿ
ಇನ್ನು 13.9 ಕಿಮೀ ಉದ್ದದ ಡೈರಿ ಸರ್ಕಲ್ನಿಂದ ನಾಗವಾರ ಮೆಟ್ರೋ ಕಾಮಗಾರಿಯು ನಡೆಯುತ್ತಿದ್ದು, ನಿಲ್ದಾಣ, ಕಾಸ್ಟಿಂಗ್ ಯಾರ್ಡ್, ಸುರಂಗ ಮಾರ್ಗದ ಕೆಲಸಗಳು ಪ್ರಗತಿಯಲ್ಲಿದೆ.