ಬೆಂಗಳೂರು:ಸೆಟ್ಲ್ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆದಿರುವ ಆರೋಪ ನಗರದ ಕೆಲ ಪೊಲೀಸರ ವಿರುದ್ಧ ಕೇಳಿ ಬಂದಿದೆ. ಇದರ ಬೆನ್ನಲ್ಲೇ 2 ಪ್ರತ್ಯೇಕ ಪ್ರಕರಣಗಳಲ್ಲಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪದಡಿ ವೈಟ್ಫೀಲ್ಡ್ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಪೊಲೀಸರೇ ಇಲ್ಲಿ ಆರೋಪಿಗಳಾಗಿದ್ದಾರೆ.
ಇದಕ್ಕೆ ಸಾಕ್ಷ್ಯ ಎಂಬಂತೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರೇಣುಕಾ, ಸಬ್ ಇನ್ಸ್ಪೆಕ್ಟರ್ಗಳಾದ ನವೀನ್, ಗಣೇಶ್, ಕಾನ್ಸ್ಪೇಬಲ್ ಹೇಮಂತ್ ಹಾಗೂ ಕೋಣನಕುಂಟೆ ಠಾಣೆಯ ಕಾನ್ಸ್ಟೇಬಲ್ ಮೊಹಮ್ಮದ್ ವಿರುದ್ಧ ಎಸಿಬಿಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪ್ರಕರಣದ ಹಿನ್ನೆಲೆ:
ಉದ್ಯಮಿ ಗೋಪಿನಾಥ್ ಇಂಟಿರಿಯರ್ ಡಿಸೈನ್ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಹಣ ಪಡೆದಿದ್ದರು. ಆದರೆ, ಕೆಲಸ ಮಾಡಿಸಿಕೊಡದೇ ಹಣವನ್ನೂ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಗೋಪಿನಾಥ್ ವಿರುದ್ಧ ದೂರು ದಾಖಲಾಗಿತ್ತು. ಜುಲೈ 16ರಂದು ಗೋಪಿನಾಥ್ ಮನೆಗೆ ಬಂದಿದ್ದ ಪಿಎಸ್ಐ ಗಣೇಶ್ ಪತ್ನಿ, ಮಗು ಸಮೇತ ಠಾಣೆಗೆ ಕರೆತಂದಿದ್ದರು.
ಎಫ್.ಐ.ಆರ್ ತೋರಿಸಲು ಹೇಳಿದ್ದಕ್ಕೆ ಗಣೇಶ್ ಕಪಾಳಕ್ಕೆ ಹೊಡೆದು ಅವರ ಹಾಗೂ ಪತ್ನಿಯ ಮೊಬೈಲ್ ತೆಗೆದುಕೊಂಡಿದ್ದಾರೆ. ಮಧ್ಯಾಹ್ನ ಚೇಂಬರ್ಗೆ ಕರೆಸಿದ ಇನ್ಸ್ಪೆಕ್ಟರ್, ಗೋಪಿನಾಥ್ ಹಾಗೂ ಪತ್ನಿಯನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರು. ದೂರುದಾರರಿಗೆ ಡಿಸೈನ್ ಕೆಲಸ ಮಾಡಲು ಅಥವಾ ಹಣ ವಾಪಸ್ ನೀಡಲು ಸಿದ್ಧನಿದ್ದೇನೆ. ಕಾಲಾವಕಾಶ ನೀಡಬೇಕು ಎಂದು ಹೇಳಿದ್ದೆ. ಆಗ ಪಿಎಸ್ಐ ನವೀನ್ ಕಾನ್ಫರೆನ್ಸ್ ರೂಂಗೆ ಕರೆದೊಯ್ದು ಅರೆಸ್ಟ್ ಎಲ್ಲ ಯಾಕೆ ? ಸೆಟ್ಲ್ ಮಾಡಿಕೋ ಎಂದಿದ್ದರು ಎಂದು ಗೋಪಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಲಾಗ್ತಿದೆ.
5 ಲಕ್ಷ ರೂ.ನ್ನು ದೂರುದಾರರ ಖಾತೆಗೆ ಹಾಕು. ನಿಮ್ಮಿಬ್ಬರನ್ನು ಅರೆಸ್ಟ್ ಮಾಡದಿರಲು 10 ಲಕ್ಷ ರೂ. ನೀಡಬೇಕು. ಹಣ ನೀಡದಿದ್ದರೆ ಜೈಲಿಗೆ ಕಳಿಸುವಂತೆ ಇನ್ಸ್ಪೆಕ್ಟರ್ ಸೂಚಿಸಿದ್ದಾರೆ ಎಂದು ಹೇಳಿದ್ದರು ಎಂಬುದಾಗಿ ದೂರಿನಲ್ಲಿ ಗೋಪಿನಾಥ್ ಹೇಳಿದ್ದಾರೆ.
ಲಂಚ ಕೊಟ್ಟರೂ ಮತ್ತೆ ಬೇಡಿಕೆ:
ಇದಾದ ಬಳಿಕ ಸಂಬಂಧಿಕರ ಮೂಲಕ 10 ಲಕ್ಷ ರೂ.ನ್ನು ಪತ್ನಿಯ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಕಾರು ಚಾಲಕನ ಮೂಲಕ ಪತ್ನಿಯ ಬ್ಯಾಂಕ್ ಖಾತೆಯ ಚೆಕ್ಬುಕ್ನ್ನು ಸೈಬರ್ ಠಾಣೆಗೆ ತರಿಸಿಕೊಂಡು ಪಿಎಸ್ಐ ಗಣೇಶ್ ಸೂಚನೆಯಂತೆ ಸ್ಥಳೀಯ ಬ್ಯಾಂಕ್ಗೆ ಹೋಗಿ 5 ಲಕ್ಷ ರೂ.ನ್ನು ನನ್ನ ವಿರುದ್ಧ ದೂರು ಕೊಟ್ಟವರ ಖಾತೆಗೆ ವರ್ಗಾವಣೆ ಮಾಡಿದ್ದೆ. ಉಳಿದ 5 ಲಕ್ಷ ರೂ.ನ್ನು ಡ್ರಾ ಮಾಡಿಕೊಂಡು ಸೈಬರ್ ಕ್ರೈಂ ಠಾಣೆಗೆ ತಂದು ಪಿಎಸ್ಐ ಸೂಚನೆಯಂತೆ ಸೋಫಾ ಮೇಲಿಟ್ಟಿದ್ದೆ. ಇದನ್ನು ಕಾನ್ಸ್ಟೇಬಲ್ ಹೇಮಂತ್ ತೆಗೆದುಕೊಂಡು ಹೋಗಿದ್ದರು. ಠಾಣೆಯಿಂದ ಹೊರ ಬರುವಾಗ ಬಾಕಿ 5 ಲಕ್ಷ ರೂ. ತರುವಂತೆ ಸೂಚಿಸಿದ್ದರು ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.