ಬೆಂಗಳೂರು:ಬಿಬಿಎಂಪಿಯ ಪ್ರಥಮ ದರ್ಜೆ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಮಾಜಿ ಅಧ್ಯಕ್ಷನಾಗಿದ್ದ ಮಾಯಣ್ಣನ ಮನೆ ಹಾಗೂ ಆಪ್ತರ ಮನೆ ಮೇಲೆ ಎಸಿಬಿ ದಾಳಿ ತೀವ್ರಗೊಂಡಿದೆ. ನಗರದ ಕತ್ರಿಗುಪ್ಪೆಯಲ್ಲಿರುವ ಮಾಯಣ್ಣನವರ ನಿವಾಸದಲ್ಲಿ ಸತತವಾಗಿ ಏಳು ಗಂಟೆಯಿಂದ 12 ಮಂದಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಬೆಂಗಳೂರು ಸೇರಿ ಕುಣಿಗಲ್, ದಾಬಸ್ಪೇಟೆ, ದೇವನಹಳ್ಳಿಯ ಆಸ್ತಿ - ಪಾಸ್ತಿ ವಿವರಗಳನ್ನು ಕಲೆಹಾಕಿದ್ದಾರೆ ಎನ್ನಲಾಗ್ತಿದೆ. ಚಾಮರಾಜಪೇಟೆಯ ಮಾಯಣ್ಣನ ಕಚೇರಿಯಲ್ಲಿ ಆಸ್ತಿಪತ್ರಗಳು ಲಭಿಸಿವೆ. ಮಾಯಣ್ಣ ಉದ್ಯೋಗದ ಜೊತೆ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ಕೂಡ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಏಳಿಗೆ ಸಹಿಸಲಾಗದೇ ದೂರು:
ಮಾಯಣ್ಣ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಉಮಾದೇವಿ ಎಂಬುವರ ಮನೆ ಮೇಲೆಯೂ ಎಸಿಬಿ ದಾಳಿ ನಡೆದಿದೆ. ಅಧಿಕಾರಿಗಳ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾ, ಮಾಯಣ್ಣ ಹಾಗೂ ನನ್ನನ್ನು ದೂರ ಮಾಡಲು ಈ ದಾಳಿ ನಡೆದಿದೆ. ನಮ್ಮ ಏಳಿಗೆ ಸಹಿಸಲಾಗದೇ ಯಾರೋ ಹುನ್ನಾರ ನಡೆಸಿ ದೂರು ಕೊಟ್ಟಿದ್ದಾರೆ. ಏನೇ ಆದರೂ ನಾನು ಮಾಯಣ್ಣ ಅವರೊಂದಿಗಿನ ಒಡನಾಟ ಬಿಡುವುದಿಲ್ಲ ಎಂದರು.
ಪ್ರತಿಸ್ಪರ್ಧಿ ಆಗುತ್ತಾರೆ ಎಂದು ದಾಳಿ:
ಜಿದ್ದಿಗಾಗಿ ಈ ರೀತಿ ಮಾಡಿದ್ದು, ಯಾರು ದೂರು ಕೊಟ್ಟಿದ್ದಾರೆ ಎಂದು ಗೊತ್ತಿಲ್ಲ. ನಾನು ಮಾಯಣ್ಣರ ವಲಯದಲ್ಲಿ ಇದ್ದೇನೆ ಎಂದು ಬಿಂಬಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಯಣ್ಞ ಜೊತೆ ಗುರುತಿಸಿಕೊಂಡಿದ್ದಕ್ಕೆ ಈ ದಾಳಿ ಆಗಿದೆ. ನನ್ನ ಪತಿ ಮೃತರಾದ ಬಳಿಕ ತಂದೆಯ ಮನೆಯಲ್ಲೇ ಬಂದಿದ್ದೇನೆ. ದಾಳಿಯಿಂದ ಅವರಿಗೂ ಅವಮಾನ ಆದಂತಾಗಿದೆ. ತಮಗೆ ಪ್ರತಿಸ್ಪರ್ಧಿ ಆಗುತ್ತಾರೆಂದು ದಾಳಿ ಮಾಡಿಸಲಾಗಿದೆ ಎಂದು ಉಮಾದೇವಿ ಆರೋಪಿಸಿದ್ದಾರೆ.
ಐದಾರು ವರ್ಷದಿಂದ ಮಾಯಣ್ಣರಿಂದ ದೂರ ಇರಿ ಎಂದು ಬೆದರಿಕೆ ಹಾಕಿದ್ದರು. ಐದಾರು ಜನರು ಬೆದರಿಕೆ ಹಾಕಿರುವ ಮೆಸೇಜ್ ನನ್ನ ಬಳಿಯಿದೆ. ಸಾಹಿತ್ಯ ಪರಿಷತ್ ಚುನಾವಣೆಯಾಗಿ ಎರಡೇ ದಿನಕ್ಕೆ ಹೀಗಾಗಿದೆ. ಚುನಾವಣೆಗೆ ಮುನ್ನವೇ ದಾಳಿ ಮಾಡಿದರೆ ಸಿಂಪತಿಯಿಂದ ಗೆದ್ದು ಬಿಡುತ್ತಾರೆ ಎಂದು ಚುನಾವಣೆ ಬಳಿಕ ಹೀಗೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಅನಿಕೇತನ ಕನ್ನಡ ಬಳಗ ಕಚೇರಿ ಚಾಮರಾಜಪೇಟೆಯಲ್ಲಿದೆ, ಅಲ್ಲಿಗೆ ಬರುವಂತೆ ನನಗೆ ಎಸಿಬಿ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ನಾವು ಯಾವುದೇ ಅಕ್ರಮ ಎಸಗಿಲ್ಲ. ಒಂದು ಹೆಣ್ಣಿನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ದಾಳಿಯಾಗಿದೆ ಎಂದು ಉಮಾದೇವಿ ಆರೋಪಿಸಿದ್ದಾರೆ.
ಇದನ್ನೂ ಓದಿ:ACB Raid: ಗದಗ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ