ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ಕಚೇರಿಗಳ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ. 200ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದು, ಕೆಲ ವಿಭಾಗಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಕಚೇರಿ ಸೇರಿದಂತೆ ನಗರ ಯೋಜನೆ, ಕೇಂದ್ರ ಕಚೇರಿ, ಟಿಡಿಆರ್, ವಲಯ ಕಚೇರಿ, ಜಂಟಿ ಆಯುಕ್ತರ ಕಚೇರಿ, ರೆವಿನ್ಯೂ ಕಚೇರಿ ಸೇರಿದಂತೆ 27 ಕಡೆ ಏಕಕಾಲದಲ್ಲಿ ದಾಳಿ ನಡೆದಿದ್ದು, ಸತತ 9 ಗಂಟೆಗಳ ಕಾಲ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಂದಾಯ, ಜಾಹೀರಾತು, ಆರೋಗ್ಯ, ನಗರ ಯೋಜನೆ ಸೇರಿದಂತೆ ಹಲವು ವಿಭಾಗಗಳಲ್ಲಿನ ಅಕ್ರಮಗಳ ಕುರಿತಂತೆ ಸಂಬಂಧಪಟ್ಟ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಾಹೀರಾತು ವಿಭಾಗದಲ್ಲಿ ಭಾರಿ ಭ್ರಷ್ಟಾಚಾರ:ಜಾಹೀರಾತು ವಿಭಾಗದ ಅಧಿಕಾರಿಗಳು ಪಿಪಿಪಿ ಮಾದರಿಯಲ್ಲಿ ಬಸ್ ತಂಗುದಾಣ, ಸ್ಕೈ ವಾಕ್ ನಿರ್ಮಾಣ ಮಾಡುವ ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳಿಂದ ವಾರ್ಷಿಕ ಗುತ್ತಿಗೆ, ಬಾಡಿಗೆ, ಜಾಹೀರಾತು ಪ್ರದರ್ಶನ ಮೊತ್ತ, ಜಿಎಸ್ಟಿ ಮೊತ್ತ ಸಂಗ್ರಹಣೆ ಮಾಡದೆ ಇರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ 27 ಕಚೇರಿಗಳ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ಏಜೆನ್ಸಿ ಹಾಗೂ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಕ್ರಮ ಎಸಗಿರುವ ಸಾಧ್ಯತೆ ಇದೆ. ಜಾಹೀರಾತು ವಿಭಾಗದಿಂದ 230 ಕೋಟಿ ರೂಪಾಯಿ ಹಣ ವಸೂಲಿ ಮಾಡದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಒಂದು ವರ್ಷದಿಂದ ಬಸ್ ನಿಲ್ದಾಣದಲ್ಲಿ ಜಾಹೀರಾತು ನೀಡದೇ ಸರ್ಕಾರಕ್ಕೆ ನಷ್ಟ ಉಂಟಾಗಿದೆ.
ಇದನ್ನೂ ಓದಿ:ಅಡಕೆ ಕದ್ದ ಬೆನ್ನಲ್ಲೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಕಳ್ಳ: ಸುಳಿವು ಕೊಟ್ಟ ಸಿಸಿಟಿವಿ
ಟಿಡಿಆರ್ ವಿಭಾಗದಲ್ಲೂ ಅವ್ಯವಹಾರ:ಮಧ್ಯವರ್ತಿಗಳು ಮತ್ತು ಭೂಮಾಲೀಕರ ಜೊತೆ ಸೇರಿ ಟಿಡಿಆರ್ ವಿಭಾಗದಲ್ಲಿಯೂ ಅವ್ಯವಹಾರ ನಡೆದಿದೆ. ಅದೂರು, ರಾಂಪುರ, ಸೀಗೇಹಳ್ಳಿ, ವೈಟ್ ಫೀಲ್ಡ್, ವಾರಣಾಸಿ ಕಡೆಗಳಲ್ಲಿ ಅವ್ಯವಹಾರ ಬೆಳಕಿಗೆ ಬಂದಿದೆ.
ನಗರ ಯೋಜನಾ ವಿಭಾಗದಲ್ಲೂ ಅಕ್ರಮ:ಖಾಸಗಿ ವ್ಯಕ್ತಿಗಳು ಮತ್ತು ಬಿಲ್ಡರ್ಗಳ ಜೊತೆ ಸೇರಿಕೊಂಡು ನಗರ ಯೋಜನಾ ವಿಭಾಗದಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ 21 ಕಡತಗಳನ್ನ ಪರಿಶೀಲನೆ ನಡೆಸಲಾಗಿದ್ದು, ಪ್ರಾಥಮಿಕ ತನಿಖೆ ವೇಳೆ ಸುಮಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲೂ ಅಕ್ರಮ:ಬಿಬಿಎಂಪಿ ವ್ಯಾಪ್ತಿಯ ಇಂಜಿನಿಯರ್ಗಳು ಗುತ್ತಿಗೆದಾರರ ಜೊತೆ ಸೇರಿ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಸುಮಾರು 200 ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ಒಂದೇ ಕಾಮಗಾರಿಗೆ ಎರಡು ಬಿಲ್ ಮಂಜೂರು ಮಾಡಿರುವುದು ಬಹಿರಂಗಗೊಂಡಿದೆ.
ಕಂದಾಯ ವಿಭಾಗದಲ್ಲಿಯೂ ಅಕ್ರಮ:ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಕಟ್ಟಡಗಳ ನಿಗದಿತ ಶುಲ್ಕ ವಸೂಲಿ ಮಾಡದೆ ಕಡಿಮೆ ಕಂದಾಯ ವಸೂಲಿ ಮಾಡಲಾಗಿದೆ. ಬಳಿಕ ಮನೆ ಮಾಲೀಕರಿಂದ ಅಕ್ರಮ ಸಂಭಾವನೆ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ದಾಳಿ ವೇಳೆ ತಿಳಿದುಬಂದಿದೆ. ಪರಿಶೀಲನೆ ವೇಳೆ ಒಂದು ಆಸ್ಪತ್ರೆ, ಎರಡು ಮಾಲ್ಗಳಿಂದ ತೆರಿಗೆ ಹಣ ಸಂಗ್ರಹಿಸದೆ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿರುವುದು ಬೆಳಕಿಗೆ ಬಂದಿದೆ.
ಒಟ್ಟಾರೆ, ದಾಳಿ ವೇಳೆ ಬಿಬಿಎಂಪಿಯ ವಿವಿಧ ವಿಭಾಗಗಳ 45 ಕಡತಗಳನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ಸರ್ಕಾರಕ್ಕೆ / ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.