ಬೆಂಗಳೂರು :ಖಾಸಗಿ ಮಧ್ಯವರ್ತಿಗಳ ನೆರವಿನಿಂದ ತಮ್ಮ ವ್ಯಾಪ್ತಿಗೆ ಬರುವ ಕಾರ್ಖಾನೆ ಹಾಗೂ ಸೆಕ್ಯೂರಿಟಿ ಏಜೆನ್ಸಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಮಿಕ ಇಲಾಖೆಯ ಮೇಲೆ ದಾಳಿ ಮಾಡಿತ್ತು. ಈ ಪ್ರಕರಣ ಸಂಬಂಧ ನೋಟಿಸ್ ನೀಡಿ 10ಕ್ಕಿಂತ ಹೆಚ್ಚು ಮಂದಿ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ.
ಡೈರಿ ಸರ್ಕಲ್ ಬಳಿಯಿರುವ ಕಾರ್ಮಿಕ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು, ಖಾಸಗಿ ಮಧ್ಯವರ್ತಿಗಳ ಮೂಲಕ ಕಾರ್ಖಾನೆ ಮಾಲೀಕರು, ಬೃಹತ್ ಮಳಿಗೆಗಳು, ಸೆಕ್ಯೂರಿಟಿ ಏಜೆನ್ಸಿ, ಖಾಸಗಿ ಕಚೇರಿಗಳ ಮೇಲ್ವಿಚಾರಕರು, ಹೋಟೆಲ್, ಒಳಾಂಗಣ ವಿನ್ಯಾಸ ಹಾಗೂ ಕಟ್ಟಡ ಕಾರ್ಮಿಕರು ಹೊಂದಿರುವ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ನಿರ್ವಹಣೆ ಸರಿಯಿಲ್ಲ ಎಂದು ಹೇಳಿ ಮಾಲೀಕರಿಗೆ ನೀಡಿ ಅವರಿಂದ ಅಕ್ರಮವಾಗಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಖಚಿತ ಮಾಹಿತಿ ಮೇರೆಗೆ ನಿನ್ನೆ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಂಟು ಮಂದಿ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಕಾರ್ಮಿಕ ಭವನದಲ್ಲಿನ ಎಂಟು ಕಚೇರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿತ್ತು.