ಬೆಂಗಳೂರು :ಸಾಂಕ್ರಾಮಿಕ ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಈ ವರ್ಷವೂ 8ನೇ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬೈಸಿಕಲ್ ಯೋಜನೆ ಮುಂದುವರೆಸುವುದು ಅನುಮಾನ.
ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಇದೀಗ ಕೊರೊನಾ ಹೊಡೆತಕ್ಕೆ ಸಿಲುಕಿದ್ದು ಇದೀಗ ಈ ಪ್ರೋತ್ಸಾಹದಾಯಕ ಯೋಜನೆಗೆ ತೊಡಕುಂಟಾಗಿದೆ. ಸರ್ಕಾರ ಅನುದಾನ ಕೊಟ್ಟರಷ್ಟೇ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆಯನ್ನ ವಿದ್ಯಾರ್ಥಿಗಳಿಗೆ ಮಾಡಲಾಗುತ್ತೆ ಅಂತಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.
ಕಳೆದ ವರ್ಷ ಲಾಕ್ಡೌನ್ ಬಿಕ್ಕಟ್ಟು ಇದ್ದರೂ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನ ನಿಲ್ಲಿಸುವುದಿಲ್ಲ ಅಂತಾ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, 2021-22ನೇ ಶೈಕ್ಷಣಿಕ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗುವುದು ಕಷ್ಟ ಎನ್ನಲಾಗುತ್ತಿದೆ. ಬಜೆಟ್ನಲ್ಲಿ ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲ. ಹೀಗಾಗಿ, ಶಾಲಾ ಮಕ್ಕಳಿಗೆ ಸೈಕಲ್ ಸಿಗುವುದು ಅನುಮಾನವಾಗಿದೆ.
ಈ ಕುರಿತು ಶಿಕ್ಷಣ ಸಚಿವ ನಾಗೇಶ್ ಮಾತನಾಡಿದ್ದು, ಕಳೆದ ಎರಡು ವರ್ಷ ಶಾಲೆಗಳೇ ನಡೆದಿಲ್ಲ. ಈಗಿನ್ನೂ ಶಾಲೆಗಳು ಶುರುವಾಗಿವೆ. ಸೈಕಲ್ ವಿತರಣೆ ಕುರಿತು ತೀರ್ಮಾನ ಮಾಡಲಾಗುವುದು. ಆದರೆ, ಈ ಯೋಜನೆ ಮುಂದುವರೆಯಲಿದೆ. ಯಾವ ವರ್ಷ ಮಾಡಬೇಕೆಂದು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಅಂದಹಾಗೆ ಮುಂದಿನ ದಿನಗಳಲ್ಲಿ ಬೈಸಿಕಲ್ ವಂಚಿತ ವಿದ್ಯಾರ್ಥಿಗಳಿಗೂ ಲಭಿಸುತ್ತಾ ಇಲ್ವಾ ಅನ್ನೋ ಪ್ರಶ್ನೆ ಹಾಗೆ ಮುಂದುವರೆದಿದೆ.
ಉಚಿತ ಬೈಸಿಕಲ್ ಯೋಜನೆ ಶುರುವಾಗಿದ್ಯಾವಾಗ?
ಅಂದಹಾಗೆ, 2006-2007ನೇ ಸಾಲಿನಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲ್ತಿ ನೀಡಲಾಯ್ತು. ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಉಚಿತ ಬೈಸಿಕಲ್ ವಿತರಣೆ ಮಾಡಲಾಗುತ್ತಿದೆ.