ಬೆಂಗಳೂರು:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡಬೇಕೆಂದು ಒತ್ತಾಯಿಸಿ ಮಲ್ಲೇಶ್ವರಂನ ಮಂತ್ರಿಮಾಲ್ ಬಳಿ ಪ್ರತಿಭಟನೆ ನಡೆಸಲಾಗಿದೆ.
2018-19ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಎಸ್.ಸಿ/ಎಸ್.ಟಿ, ಸೇರಿದಂತೆ ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇವತ್ತಿನ ವರೆಗೆ ಆ ಯೋಜನೆ ಜಾರಿಗೆ ಬರದಿರುವುದು ರಾಜ್ಯ ಸರ್ಕಾರದ ವಿದ್ಯಾರ್ಥಿಗಳ ಮೇಲಿನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ರಾಜ್ಯವು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯದ ರೈತಾಪಿ ಕುಟುಂಬಗಳು ಸಂಕಷ್ಟದಲ್ಲಿವೆ. ಇಂತಹ ದಿನಗಳಲ್ಲಿ ಹೆಚ್ಚಾಗಿ ಬಸ್ಪಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರೇ ಆಗಿದ್ದು, ರಾಜ್ಯದಲ್ಲಿನ ಎಲ್ಲ ವರ್ಗದ, ಎಲ್ಲ ಸ್ತರದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಎಬಿವಿಪಿ ಆಗ್ರಹಿಸಿತು.