ಕರ್ನಾಟಕ

karnataka

ETV Bharat / state

ದೇವಸ್ಥಾನದ ಆದಾಯ ದುರ್ಬಳಕೆ ಆರೋಪ: ಕ್ರಮ ಜರುಗಿಸಲು ಹೈಕೋರ್ಟ್ ಆದೇಶ - Abuse of temple revenue Allegation news

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವ್ಯಾಪ್ತಿಗೆ ಈ ಪ್ರಕರಣ ಬರುತ್ತದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

Abuse of temple revenue Allegation
ದೇವಸ್ಥಾನದ ಆದಾಯ ದುರ್ಬಳಕೆ ಆರೋಪ

By

Published : Sep 30, 2020, 9:07 PM IST

Updated : Sep 30, 2020, 10:39 PM IST

ಬೆಂಗಳೂರು :ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಭದ್ರಗಿರಿಯಲ್ಲಿರುವ ಶಿವಸುಬ್ರಹ್ಮಣ್ಯ ದೇವಸ್ಥಾನದ ಆದಾಯವನ್ನು ದೇವಾಲಯದ ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದೆ. ಹಾಗೆಯೇ ಸರ್ಕಾರಿ ಜಮೀನು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಿಸಲಾಗಿದೆ ಎಂಬ ಸ್ಥಳೀಯ ತಹಶೀಲ್ದಾರ್ ವರದಿ ಆಧರಿಸಿಯೂ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ದೇವಸ್ಥಾನದ ಆದಾಯದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ತರೀಕೆರೆಯ ಎಂ.ಸಿ.ಹಳ್ಳಿ ನಿವಾಸಿ ವೇಲುಮುರುಗನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲ ಎಸ್. ಕಲ್ಯಾಣ ಬಸವರಾಜು ಅವರ ವಾದ ಆಲಿಸಿದ ಪೀಠ, ಅರ್ಜಿ ಸಂಬಂಧ ‌ಮುಜರಾಯಿ‌ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ತರಿಕೆರೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ದೇವಸ್ಥಾನಕ್ಕೆ‌ ಸಂಬಂಧಿಸಿದ ಚಂದ್ರಘೋಷ್ ಮತ್ತು ಕಾರ್ತಿಕ್​​​​​​​​​ಗೆ ನೋಟಿಸ್ ಜಾರಿ‌ ಮಾಡಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದಿಸಿ, ದೇವಸ್ಥಾನಕ್ಕೆ ವಾರ್ಷಿಕ 65 ಲಕ್ಷಕ್ಕಿಂತ ಹೆಚ್ಚು ಆದಾಯವಿದೆ.‌ ಈ ಹಣವನ್ನು ದೇವಸ್ಥಾನದ ಟ್ರಸ್ಟಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ‌.‌‌‌ ಪ್ರತಿ ವರ್ಷ ಕರ್ನಾಟಕ, ಆಂಧ್ರಪ್ರದೇಶ‌ ಮತ್ತು ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಭಕ್ತರು ಈ ದೇವಸ್ಥಾಕ್ಕೆ ಬರುತ್ತಾರೆ. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಿಂದಲೂ ಸಾಕಷ್ಟು ಆದಾಯ ಬರುತ್ತದೆ. ಹಣ ದುರ್ಬಳಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿವರಿಸಿದರು. ಇದೇ ವೇಳೆ, ಪೀಠ ಅರ್ಜಿ ಮತ್ತು ಅದರಲ್ಲಿ ಲಗತ್ತಿಸಲಾಗಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ, ದೇವಸ್ಥಾನವನ್ನು ಸರ್ಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿರುವ ಬಗ್ಗೆ ತಹಶೀಲ್ದಾರ್ ಸರ್ಕಾರಕ್ಕೆ ವರದಿ ಸಲ್ಲಿಸಿರುವ ವಿಚಾರ ತಿಳಿದು ಬಂದಿತು‌.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಂಬಂಧಪಟ್ಟ ಇಲಾಖೆಯಿಂದ‌ ಪೂರ್ವಾನುಮತಿ ಪಡೆಯದೇ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಈ ದೇವಸ್ಥಾನ ನಿರ್ಮಿಸಲಾಗಿದೆ ಎಂದು 2019ರಲ್ಲಿ ತರಿಕೆರೆ ತಹಶೀಲ್ದಾರ್ ವರದಿ ನೀಡಿದ್ದಾರೆ. ಹೀಗಾಗಿ, ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವ್ಯಾಪ್ತಿಗೆ ಈ ಪ್ರಕರಣ ಬರುತ್ತದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

Last Updated : Sep 30, 2020, 10:39 PM IST

ABOUT THE AUTHOR

...view details