ಕರ್ನಾಟಕ

karnataka

ಕಂದಾಯ ಸಚಿವರ ಸಭೆಗೆ ಗೈರು: ಆನೇಕಲ್ ತಹಶೀಲ್ದಾರ್ ಅಮಾನತು

By

Published : May 26, 2020, 9:40 PM IST

ಅನುಮತಿಯನ್ನು ಪಡೆಯದೆ ಕಂದಾಯ ಸಚಿವರು ಕರೆದಿದ್ದ ಸಭೆಗೆ ಗೈರಾಗಿರುವ ಆರೋಪದ ಮೇಲೆ ಆನೇಕಲ್ ತಹಶೀಲ್ದಾರ್ ಸಿ. ಮಹದೇವಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

Anekal Tahsildar  suspended
ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಅಮಾನತು

ಬೆಂಗಳೂರು: ಕಂದಾಯ ಸಚಿವರ ಸಭೆಗೆ ಕಾರಣ ನೀಡದೇ ಗೈರಾದ ಆನೇಕಲ್ ತಹಶೀಲ್ದಾರ್ ಸಿ. ಮಹದೇವಯ್ಯರನ್ನು ಕರ್ತವ್ಯ ದುರ್ನಡತೆ, ನಿರ್ಲಕ್ಷ್ಯತೆ ಆರೋಪದ ಮೇಲೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದೇಶ ಪ್ರತಿ
ಆದೇಶ ಪ್ರತಿ
ಕಂದಾಯ ಮತ್ತು ಪೌರಾಡಳಿತ ಸಚಿವರ ಅಧ್ಯಕ್ಷತೆಯಲ್ಲಿ 2019ರ ಡಿಸೆಂಬರ್ 27 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಬಾಕಿ ಉಳಿದಿರವ 94 ಸಿ ಮತ್ತು 94 ಸಿಸಿ ಅರ್ಜಿಗಳ ವಿಲೇವಾರಿ ಮತ್ತು ಇತರೆ ಕಂದಾಯ ವಿಷಯಗಳ ಬಗ್ಗೆ ಚರ್ಚಿಸಲು ಬೆಳಿಗ್ಗೆ 11 ಗಂಟೆಗೆ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರೂ ಸಭೆಗೆ ಆನೇಕಲ್​ ತಹಶೀಲ್ದಾರ್​ ಹಾಜರಾಗಿರಲಿಲ್ಲ. ಕೆಲವು ಗಂಭೀರ ವಿಷಯಗಳ ಬಗ್ಗೆ ಸಚಿವರು ಚರ್ಚಿಸಿದ್ದು, ಸಂಬಂಧಪಟ್ಟ ವಿಷಯಗಳಿಗೆ ಸಮರ್ಪಕವಾದ ಉತ್ತರವನ್ನು ಸಚಿವರಿಗೆ ಒದಗಿಸಲಾಗದೆ ಮುಜುಗರಕ್ಕೆ ಈಡಾದ ಪರಿಸ್ಥಿತಿ ಉಂಟಾಗಿದೆ. ಸಭೆ ಇದ್ದರೂ ಸಹ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಅನುಮತಿಯನ್ನು ಪಡೆಯದೆ, ಸಚಿವರ ಸೂಚನೆಯನ್ನು ಉಲ್ಲಂಘಿಸಿ ಸಭೆಗೆ ಗೈರು ಹಾಜರಾಗಿದ್ದಾರೆ. ಇದರಿಂದ ಆನೇಕಲ್ ತಹಶೀಲ್ದಾರ್ ಅವರ ಕಾರ್ಯ ವೈಖರಿ ಮತ್ತು ಸರ್ಕಾರಿ ಕರ್ತವ್ಯದಲ್ಲಿ ಅಸಡ್ಡೆ ಮನೋಭಾವ ಹೊಂದಿರುವುದು ಕಂಡು ಬಂದಿದೆ. ಆದುದರಿಂದ ಅವರ ಕರ್ತವ್ಯ ಲೋಪವನ್ನು ಪರಿಗಣಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ 19(1)ರನ್ವಯ ಸೇವೆಯಿಂದ ಅಮಾನತು ಮಾಡಬೇಕೆಂದು ಶಿಫಾರಸ್ಸು ಮಾಡಿ ಸದರಿ ಜಾಗಕ್ಕೆ ಬೇರೆ ಅಧಿಕಾರಿಯನ್ನು ನಿಯೋಜಿಸಬೇಕೆಂದು ಕೋರಿದ್ದು, ಅದನ್ನು ಈಗ ಮಾನ್ಯ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ಸದರಿ ಅಧಿಕಾರಿಯವರನ್ನು 1957 ರ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, ನಿಯಮ 19(1)(ಡಿ) ಗಳ ಅನ್ವಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಮಹದೇವಯ್ಯರ ಹುದ್ದೆಯ ಮೇಲಿನ ಹಕ್ಕನ್ನು ಸೂಕ್ತವಾಗಿ ಇತರೆ ಕಾರ್ಯಕಾರಿಯೇತರ ಹುದ್ದೆಗೆ ಬದಲಾಯಿಸುವ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನಿಯಮಾನುಸಾರ ಸೂಕ್ತ ಕ್ರಮ ವಹಿಸಬೇಕು. ಅಮಾನತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಮತ್ತು ಸಕ್ಷಮ ಪ್ರಾಧಿಕಾರಿಯ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.

ABOUT THE AUTHOR

...view details