ಬೆಂಗಳೂರು: ವಿಧಾನಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಮಾತನಾಡುತ್ತಿದ್ದ ವೇಳೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಇರುವುದನ್ನು ಗಮನಿಸಿದ ಸಿದ್ದರಾಮಯ್ಯ ಅವರು, ಅಧಿಕಾರಿಗಳೇ ಇಲ್ಲ. ಅಧಿಕಾರಿಗಳು ಇಲ್ಲದೇ ಸದನ ಯಾಕೆ ನಡೆಸುತ್ತಿರೀ?, ಅಧಿಕಾರಿಗಳು ಅಂದರೆ ದೇವಲೋಕದವರಾ ? ಎಂದು ಪ್ರಶ್ನಿಸಿದರು.
ನಾವು ಏನು ಬರೀ ರೆಕಾರ್ಡ್ಗೆ ಹೋಗಲಿ ಅಂತಾ ಮಾತನಾಡ್ತೀವಾ..?, ಅಧಿಕಾರಿಗಳಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ನಾವು ತೌಡು ಕುಟ್ಟೋಕೆ ಬರಬೇಕಾ. ಕಾಟಾಚಾರಕ್ಕೆ ಯಾಕೆ ವಿಧಾನಸಭೆ ನಡೆಸಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಮಾತಿನ ಮಧ್ಯೆಯೇ ಸೂಚನೆ ನೀಡಿದ ಸಭಾಧ್ಯಕ್ಷರು, ಅಧಿಕಾರಿಗಳಿಗೆ ಸದನಕ್ಕೆ ಬರುವಂತೆ ತಿಳಿಸಿದರು.
ಸಿ.ಟಿ. ರವಿಗೆ ಟಾಂಗ್ : ಚರ್ಚೆ ಮುಂದುವರಿಸಿದ ಸಿದ್ದರಾಮಯ್ಯ ಅವರು ಸಿ.ಟಿ. ರವಿಗೆ ಟಾಂಗ್ ನೀಡಿ, ರಾಜ್ಯಪಾಲರ ಭಾಷಣ ವೇಳೆ ಸಿ.ಟಿ. ರವಿ ಬಹಳ ಸಲ ನನ್ನ ಹೆಸರು ಹೇಳಿದ್ದಾರೆ. ನನ್ನ ಸ್ಮರಣೆ ಮಾಡಿಕೊಂಡಿದ್ದಕ್ಕೆ ಸಂತೋಷ, ಅಭಿನಂದನೆ. ಈಗ ನನ್ನ ಹೆಸರನ್ನು ಬಿಜೆಪಿಯವರು ಎಲ್ಲರೂ ಹೇಳೋಕೆ ಶುರು ಮಾಡಿದ್ದಾರೆ ಎಂದು ಟಾಂಗ್ ನೀಡಿದರು.
ರಾಜಕಾರಣದಲ್ಲಿ ನಾನು ಯಾವಾಗಲೂ ರೆಲವೆಂಟ್ : ನಾನು ತುಂಬಾ ರೆಲವೆಂಟ್ (ಪ್ರಸ್ತುತ) ಇರ್ಬೇಕು, ಹಾಗಾಗಿ ನನ್ನ ಹೆಸರು ಹೇಳ್ತಿದಾರೆ ಎಂದರು, ಇದೇ ವೇಳೆ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ‘‘ನೀವು ರೆಲವೆಂಟ್ ಅನ್ನೋದ್ರಲ್ಲಿ ನಿಮಗೆ ಅನುಮಾನ ಇದೆಯಾ?,’’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದಲ್ಲಿ ನಾನು ಯಾವಾಗಲೂ ರೆಲವೆಂಟ್ ಇರ್ತೀನಿ, ಇರ್ರೆಲವೆಂಟ್ ಆಗಿ ನಾನು ಯಾವ ಕಾಲಕ್ಕೂ ಇರಲ್ಲ, ಮುಂದೇನೂ ಇರಲ್ಲ, ಈಗಲೂ ಇರಲ್ಲ, ಹಿಂದೆಯೂ ಇರಲಿಲ್ಲ ಎಂದು ಕುಟುಕಿದರು.
ಬಿಜೆಪಿ ಸರ್ಕಾರ ಬಂದ ಮೇಲೆ ಸುಳ್ಳನ್ನೇ ಹೆಚ್ಚು ಹೇಳಿರುವುದು. ಸತ್ಯ ಹೇಳಿರುವುದು ಕಡಿಮೆ. ವಸ್ತು ಸ್ಥಿತಿ ಬಿಟ್ಟು ಬೇರೆ ಹೇಳುತ್ತಾರೆ. ವಸ್ತು ಸ್ಥಿತಿ, ಅಭಿವೃದ್ಧಿ ಕೆಲಸಗಳು ಬಗ್ಗೆ ಹೇಳಿಲ್ಲ. ರಾಜ್ಯಪಾಲರ ಭಾಷಣಕ್ಕೆ ಒಂದು ಹಿನ್ನೋಟ ಇರಬೇಕು. ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇದ್ದಾರೇ, ಅಧಿಕಾರವಧಿಯ ಸಾಧನೆಗಳನ್ನು ಆರ್ಥಿಕ, ಸಾಮಾಜಿಕ, ರಾಜ್ಯದ ಅಭಿವೃದ್ಧಿ ಬಗ್ಗೆ ವಿವರಿಸಬೇಕಾಗಿತ್ತು. ಮತ್ತೆ ಮುನ್ನೋಟ ಕೂಡ ಇರಬೇಕಾಗಿತ್ತು. ಇವೆರಡು ಕೂಡ ರಾಜ್ಯಪಾಲರ ಭಾಷಣದಲ್ಲಿ ಪ್ರತಿಬಿಂಬಿತವಾಗಬೇಕು ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಆದರೆ, ಉದ್ಯಮಿಗಳ ಸಾಲ ಮನ್ನಾ ಮಾಡಿಲ್ಲವೆ? ಸುಮಾರು 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು. ಇದು ಬಿಜೆಪಿ ಮನಸ್ಥಿತಿ. ಅದಕ್ಕೆ ನಾನು ಹೇಳಿದ್ದು, ಸುಳ್ಳು ಹೇಳಿದ್ದಾರೆ ಎಂದು. ಗೊಬ್ಬರದ ಸಬ್ಸಿಡಿ ತೆಗೆದು ಹಾಕಿದ್ದೀರಾ ಇನ್ನೆಲ್ಲಿ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಕುಟುಕಿದರು. ಸುದೀರ್ಘವಾಗಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಕರ್ನಾಟಕವೇ ಮಾಡೆಲ್, ನಮಗೆ ಯುಪಿ, ಗುಜರಾತ್ ಮಾಡೆಲ್ ಬೇಕಿಲ್ಲ, ರಾಜ್ಯಪಾಲರಿಂದ ಸರ್ಕಾರ ಬರೀ ಸುಳ್ಳು ಹೇಳಿಸಿದೆ: ಹರಿಪ್ರಸಾದ್