ಬೆಂಗಳೂರು: ನನಗೆ ಸಚಿವ ಸ್ಥಾನ ಕೊಡಿ ಎನ್ನುವ ಬೇಡಿಕೆ ನನ್ನದಲ್ಲ ನಮ್ಮ ಜಿಲ್ಲೆಗೆ ಅವಕಾಶ ಕೊಡಬೇಕು, ಗೆದ್ದಿರುವ ಹಿರಿಯರಿಗೆ ಅವಕಾಶ ಕೊಡಬೇಕು ಇದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಸ್ಥಾನ ಕುರಿತು ಎಂ.ಪಿ. ರೇಣುಕಾಚಾರ್ಯ ಹೇಳಿಕೆ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು,ಇರುವ ವಾಸ್ತವಾಂಶ ತಿಳಿಸುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ ಯಾರನ್ನು ಸೇರಿಸಬೇಕು ಕೈಬಿಡಬೇಕು ಅನ್ನೋದು ಸಿಎಂ, ರಾಜ್ಯಾಧ್ಯಕ್ಷರು, ವರಿಷ್ಠರಿಗೆ ಬಿಟ್ಟ ನಿರ್ಧಾರ ಎಂದರು.
ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ, ಕೆಲವರನ್ನು ಕೈ ಬಿಡಬೇಕಾಗುತ್ತದೆ. ಇದು ಬಹಳಷ್ಟು ಶಾಸಕರ ಅಭಿಪ್ರಾಯವಾಗಿದೆ. ಮೂರ್ನಾಲ್ಕು ಬಾರಿ ಗೆದ್ದವರನ್ನು ಮಂತ್ರಿ ಮಾಡಬೇಕಾಗುತ್ತದೆ, ರಾಜ್ಯಾಧ್ಯಕ್ಷರಿಗೆ ಈ ವಿಚಾರ ಹೇಳಿದ್ದೇವೆ. ಈ ವಿಚಾರವನ್ನು ನಾವು ಸಿಎಂಗೆ ಕೂಡಾ ಹೇಳುತ್ತೇವೆ. ಮುಂದಿನ ಉಪ ಚುನಾವಣೆ, ಗ್ರಾ.ಪಂ. ಜಿ.ಪಂ ಚುನಾವಣೆಯ ದೃಷ್ಟಿಯಿಂದ ತೀರ್ಮಾನ ಮಾಡಬೇಕು ಅಂತಾ ಹೇಳಿದ್ದೇವೆ. ನನಗೇ ಸಚಿವ ಸ್ಥಾನ ಕೊಡಬೇಕು ಅಂತಾ ಹೇಳುತ್ತಿಲ್ಲ, ಗೆದ್ದಿರುವ ಶಾಸಕರಿಗೆ ಕೊಡಬೇಕು ನಮ್ಮ ಜಿಲ್ಲೆ, ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದೇನೆ ಎಂದರು.
ಯೋಗೇಶ್ವರ್ ಅವರಿಗೆ ಸಚಿವ ಸ್ಥಾನಕ್ಕೆ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಮ ರಾಮ ರಾಮ ಅಂತಾ ಹೇಳುತ್ತಾ ಹೋದರೆ ಅವರು ರಾಮ ಆಗುತ್ತಾರೆ. ನಾನು ಯಾವುದನ್ನು ಎಲ್ಲಿಗೆ ಮುಟ್ಟಿಸಬೇಕೋ ಅದನ್ನು ಮುಟ್ಟಿಸಿದ್ದೇನೆ ನನ್ನ ಬಾಯಲ್ಲಿ, ಅವರ ಹೆಸರು ಹೇಳಲ್ಲ ಅವರೇನು ಅಷ್ಟು ದೊಡ್ಡವರಾ, ಪಕ್ಷಕ್ಕಿಂತ ದೊಡ್ಡವರಾ ಎಂದು ಇದೇ ವೇಳೆ ಪ್ರಶ್ನಿಸಿದರು.