ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರಗಳನ್ನು ರದ್ದುಗೊಳಿಸಿ ಚುನಾವಣಾ ಆಯೋಗದ ಮಾದರಿಯಲ್ಲಿ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕು ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನೆ ಅರ್ಜಿ ಹಾಕಬೇಕು. ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ, ಸರ್ಕಾರಗಳಿಂದ ವಾಸ್ತವ ತಲುಪುತ್ತಿಲ್ಲ. ಹಾಗಾಗಿ ಮಂಡಳಿ, ಪ್ರಾಧಿಕಾರ ರದ್ದುಪಡಿಸಿ ನಾಲ್ಕು ರಾಜ್ಯಗಳ ತಜ್ಞರು, ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಬೇಕು. ಚುನಾವಣಾ ಆಯೋಗದ ರೀತಿ ಸ್ವತಂತ್ರ ಸಮಿತಿ ರಚನೆಯಾಗಬೇಕು. ರಾಜ್ಯದಿಂದ ರಾಜ್ಯಸಭೆಗೆ ಕರ್ನಾಟಕದವರೇ ಆಯ್ಕೆಯಾಗಬೇಕು. ರಾಜ್ಯದ ಪರ ದನಿ ಎತ್ತುವಂತವರಾಗಬೇಕು. ನಿರ್ಮಲಾ ಸೀತಾರಾಮನ್ ನಡೆ ರಾಜ್ಯದ ದೌರ್ಭಾಗ್ಯ ಎಂದರು. ಮುಂದಿನ ಹೋರಾಟ ಹೇಗಿರಬೇಕು, ಇಡೀ ರಾಜ್ಯ ಬಂದ್ ಬದಲು, ಕಾವೇರಿ ಕೊಳ್ಳದ ಬಂದ್ಗೆ ಕರೆ ಕೊಡಬೇಕು ಎನ್ನುವ ಅಭಿಪ್ರಾಯ ಸಲ್ಲಿಸಿದರು.
ಸಮಿತಿ ಸಂಚಾಲಕ ಕುಮಾರಸ್ವಾಮಿ ಮಾತನಾಡಿ, ತಮಿಳುನಾಡಿಗೆ ನೀರು ಬಿಡದ ಬಗ್ಗೆ ಒಕ್ಕೋರಲಿನ ನಿರ್ಧಾರ ಮಾಡಬೇಕು. ಮಹದಾಯಿ ವಿಚಾರದಲ್ಲಿ ನಾವು ನಿರ್ಲಕ್ಷ್ಯ ವಹಿಸಿದ್ದೇವೆ. ನಮ್ಮದೂ ತಪ್ಪಿದೆ. ಆದರೂ ಕರ್ನಾಟಕ ಬಂದ್ಗೆ ಕರೆ ಕೊಡಬೇಕು. ಎಲ್ಲರ ಬೆಂಬಲ ಗಳಿಸಬೇಕು, ಚಿತ್ರರಂಗ ಸಂಪೂರ್ಣ ಬೆಂಬಲ ಕೊಡಬೇಕು. ಎರಡೂ ರಾಜ್ಯದ ಸಂಕಷ್ಟ ಪರಿಹರಿಸಲು ನಟ ರಜನಿಕಾಂತ್ ಅವರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು. ಎರಡೂ ರಾಜ್ಯಕ್ಕೆ ರಜನಿಕಾಂತ್ ಬೇಕಾದವರು. ಹಾಗಾಗಿ ಅವರ ಮಧ್ಯಸ್ಥಿಕೆ ವಹಿಸಿಕೊಂಡು ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಳ್ಳಬೇಕು. ಸರ್ವಪಕ್ಷ ಸಭೆ ಕರೆದರು, ಆದರೆ ರೈತ ಮುಖಂಡರು, ಕನ್ನಡಪರ ಹೋರಾಟಗಾರರನ್ನು ಸಭೆಗೆ ಕರೆಯದೆ ಅಸಡ್ಡೆ ತೋರಿದ್ದೀರಿ. ಇಂತಹ ತಪ್ಪು ಮಾಡಬಾರದು, ಕೂಡಲೇ ನಮ್ಮ ಸಭೆ ಕರೆಯಬೇಕು ಎಂದು ಕುರುಬೂರು ಆಗ್ರಹಿಸಿದರು.
ಹೋರಾಟಗಾರರ ಮೇಲೆ ಕೇಸು ಹಾಕಬಾರದು. ಈ ಹಿಂದೆ ಹೋರಾಟದಲ್ಲಿ ಕೇಸು ಹಾಕಿದ್ದರು. ಇದರಿಂದಾಗಿ ಹೋರಾಟಕ್ಕೆ ಮುಂದಾಗಲು ಜನರು ಹಿಂದೇಟು ಹಾಕಬಾರದು. ಕೂಡಲೇ ಸರ್ಕಾರ ಕೇಸು ಹಾಕಲ್ಲ ಎನ್ನುವ ನಿರ್ಧಾರ ಪ್ರಕಟಿಸಬೇಕು. ಕೇಸು ಹಾಕಿದರೆ ರಾಜ್ಯ ವಿರೋಧಿ ಎನ್ನುವ ನಿಲುವನ್ನು ನಾವು ತಳೆಯಬೇಕು ಎಂದರು.