ಬೆಂಗಳೂರು:ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 5 ಕೋಟಿ ರೂ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ ಹಾಲಶ್ರೀ ಅವರು ಪರಪ್ಪನ ಅಗ್ರಹಾರ ಸೇರಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆ ಶನಿವಾರ ಹಾಲಶ್ರೀ ಸ್ವಾಮೀಜಿ ಜೈಲಿನಿಂದ ಹೊರ ಬಂದರು. ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸ್ವಾಮೀಜಿಗೆ ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು.
ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾಲಶ್ರೀ, "ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು, ಅದನ್ನು ಪ್ರಕರಣದ ತನಿಖೆ ವೇಳೆ ಪರಿಗಣಿಸಬೇಕು. ಮುಂದೊಂದು ದಿನ ಈ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ನಮ್ಮನ್ನು ನಂಬಿ ಆರಾಧಿಸುವ ಸಮಾಜಕ್ಕೆ ಹಾಗೂ ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಮುಂದೆಯೂ ಆದೇ ರೀತಿ ಬದುಕು ಸಾಗಿಸುತ್ತೇನೆ" ಎಂದರು.
ಇದನ್ನೂ ಓದಿ :ಹಾಲಶ್ರೀ ವಿಚಾರಣೆ ಚುರುಕಾದ ಬೆನ್ನಲೇ ಕಂತೆ ಕಂತೆ ಹಣ ಪತ್ತೆ.. ವಿಡಿಯೋ ಮಾಡಿ ಸಿಸಿಬಿಗೆ ಪತ್ರ ಬರೆದ ವ್ಯಕ್ತಿ
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಉದ್ಯಮಿ ಗೋವಿಂದಬಾಬು ಪೂಜಾರಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಬಿ ಪೊಲೀಸರು ಪ್ರಕರಣದ ಆರೋಪಿಗಳಾದ ಹಿಂದೂಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಹಾಗೂ ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಅವರನ್ನು ಬಂಧಿಸಿದ್ದರು. ದೂರುದಾರರಿಂದ 1.5 ಕೋಟಿ ರೂ. ಪಡೆದ ಆರೋಪದ ಮೇಲೆ ಹಾಲಶ್ರೀ ಸ್ವಾಮೀಜಿಯನ್ನು 2023 ರ ಸೆ.19 ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು.