ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಮೂರನೇ ಆರೋಪಿ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಇಂದು ನಗರದ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ಸೆಪ್ಟೆಂಬರ್ 29ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿತು.
ಅಭಿನವ ಹಾಲಶ್ರಿ ಪರ ವಕೀಲ ಲೋಕೇಶ್ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಸರ್ಕಾರಿ ವಕೀಲರಿಗೆ ಸೆಪ್ಟೆಂಬರ್ 29ರಂದು ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿತು. ಹೀಗಾಗಿ, ಅಲ್ಲಿಯವರೆಗೂ ಆರೋಪಿಯನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ಒಪ್ಪಿಸಿದೆ.
ನಿನ್ನೆಯಿಂದ ಸ್ಚಾಮೀಜಿಯನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಒಂದಿಷ್ಟು ಮಹತ್ವದ ವಿಚಾರಗಳನ್ನು ಅವರು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 10:30ರ ವೇಳೆಗೆ ಸ್ವಾಮೀಜಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಚಂದ್ರಾ ಲೇಔಟ್ ಬಳಿಯ ಮನೆಯೊಂದರಲ್ಲಿ ಸ್ವಾಮೀಜಿ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅಲ್ಲಿಗೆ ಕರೆದೊಯ್ದು ಸಿಸಿಬಿ ಅಧಿಕಾರಿಗಳು ಸ್ಥಳ ಮಹಜರು ಪ್ರಕ್ರಿಯೆ ಮಾಡಲಿದ್ದಾರೆ. ಪಡೆದ ಹಣವನ್ನು ಮೈಸೂರಿನಲ್ಲಿ ಇರಿಟ್ಟಿರುವ ಮಾಹಿತಿಯಿದ್ದು, ನಂತರ ಮೈಸೂರಿಗೂ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.