ಬೆಂಗಳೂರು :ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಎನ್ನಲಾಗಿರುವ ಅಬ್ದುಲ್ ನಾಸಿರ್ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆ ಒಡ್ಡಿದ್ದ ಆರೋಪಕ್ಕೆ ಸಿಲುಕಿರುವ ಕೇರಳದ ಪತ್ರಕರ್ತೆ ಕೆ.ಕೆ.ಶಹೀನಾ ಮತ್ತಿತರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಫೆ.28ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ.ಕೆ.ಶಹೀನಾ, ಸುಬೇರ ಪಡುಪು ಮತ್ತು ಉಮರ್ ಮೌಲ್ವಿ ಸಲ್ಲಿಸಿದ್ದ ಕ್ರಿಮಿನಿಲ್ ರಿವಿಷನ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಎನ್.ಕೆ ಸುಧೀಂದ್ರರಾವ್ ಅವರಿದ್ದ ಏಕಸದಸ್ಯಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತಹ ಯಾವುದೇ ಸೂಕ್ತ ಅಂಶಗಳು ಕಾಣುತ್ತಿಲ್ಲ. ಇನ್ನು ಅವರು ತಮ್ಮನ್ನು ನಿರಪರಾಧಿಗಳು ಎಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದಲ್ಲಿ ಅವಕಾಶವಿದೆ. ಆದ್ದರಿಂದ ಅವರು ಅಲ್ಲಿಯೇ ಅವರು ತಮ್ಮ ವಾದ, ಸಾಕ್ಷ್ಯಗಳನ್ನು ಮಂಡಿಸಬಹುದು ಎಂದಿದೆ.
ಓದಿ:ಏರ್ಪೋರ್ಟ್ನಿಂದ ವರ್ಚುವಲ್ ಮೂಲಕವೇ ಬಿಜೆಪಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ!
ಅಲ್ಲದೆ, ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಹೂಡಿರುವ ಪ್ರಕರಣವನ್ನು ಕೈಬಿಡುವಂತೆ ಕೋರಿ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :ಕೆ.ಕೆ.ಶಹೀನಾ ಮತ್ತಿತರರು ತಾವು ತೆಹಲ್ಕಾ ಪತ್ರಕರ್ತರೆಂದು ಹೇಳಿಕೊಂಡು ಮಡಿಕೇರಿಯಲ್ಲಿ ಯೋಗಾನಂದ್ ಮತ್ತು ಕೆ.ಬಿ ರಫೀಕ್ ಅವರನ್ನು ಭೇಟಿ ಮಾಡಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ವಿಚಾರಿಸಿದ್ದರು.
ಅಲ್ಲದೇ, ಕೇರಳದ ಪಿಡಿಪಿ ಸಂಘಟನೆಯ ಮುಖಂಡ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ಅಬ್ದುಲ್ ನಾಸೀರ್ ಮದನಿ ವಿರುದ್ಧ ಸಾಕ್ಷ್ಯ ಹೇಳಬಾರದು, ಹೇಳಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಣ ಬೆದರಿಕೆ ಹಾಕಿದ್ದರು ಎಂಬ ಆರೋಪವಿದೆ.
ಆ ಕುರಿತು ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಸೋಮವಾರಪೇಟೆ ಮತ್ತು ಸಿದ್ದಾಪುರ ಠಾಣೆ ಪೊಲೀಸರು ಈ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಕಲಂ 34, 120ಬಿ ಮತ್ತು 506 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967 ಸೆಕ್ಷನ್ 22ರಡಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ತಮ್ಮನ್ನು ಈ ಆರೋಪದಿಂದ ಕೈಬಿಡುವಂತೆ ಕೋರಿದ್ದ ಅರ್ಜಿಯನ್ನು ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈಗ ಹೈಕೋರ್ಟ್ ಸಹ ಈ ಪ್ರಕರಣವನ್ನ ರದ್ದುಗೊಳಿಸಲು ನಿರಾಕರಿಸಿದೆ.