ಬೆಂಗಳೂರು:ಪ್ರಧಾನಿ ಮೋದಿ ಬೆಂಗಳೂರು ಇಸ್ರೋ ಭೇಟಿ ಸಂದರ್ಭದ ರೋಡ್ ಶೋ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಸ್ವಾಗತಕ್ಕೆ ಸಾರ್ವಜನಿಕರ ಜೊತೆ ರಸ್ತೆ ಪಕ್ಕ ನಿಂತಿರುವುದನ್ನು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿದೆ.
''ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ. ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ. ಕರ್ನಾಟಕದ ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ'' ಎಂದು ಟೀಕಿಸಿದೆ.
ಬಿಜೆಪಿ ನಾಯಕರಾದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್. ಅಶೋಕ್, ಮುನಿರತ್ನ, ಎಸ್.ಆರ್. ವಿಶ್ವನಾಥ್ ರಸ್ತೆ ಪಕ್ಕ ನಿಂತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಇದನ್ನು ಕಾಂಗ್ರೆಸ್ ಟೀಕೆಗೆ ಗುರಿ ಮಾಡಿದೆ. ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕರ್ನಾಟಕ ಅಬ್ಬೇಪಾರಿಯಾಗಿದೆ ಎಂದು ವ್ಯಂಗ್ಯವಾಡಿದೆ.
ಸರ್ವಾಧಿಕಾರಿ ಆಡಳಿತ:ಈ ಸಂಬಂಧ ಟ್ವೀಟ್ ಮಾಡಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ''ಇಂಥ ದುರಂತ ನೋಡುವುದು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ. ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕರು, ಮಾಜಿ ಸಚಿವರು, ಮೋದಿ ಬೆಂಗಳೂರು ಭೇಟಿ ವೇಳೆ ಶ್ವಾನದ ಸ್ಥಿತಿಗೆ ಮುಟ್ಟಿದ್ದಾರೆ. ಸ್ವಯಂ ಗೌರವ ಸಂಸ್ಕೃತಿ ಇಲ್ಲದಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಟ್ವೀಟ್ಗೆ ಬಿಜೆಪಿ ತಿರುಗೇಟು:ಕಾಂಗ್ರೆಸ್ ಟೀಕೆ ಬೆನ್ನಲ್ಲೇ ರಾಜ್ಯ ಬಿಜೆಪಿ ರೀಟ್ವೀಟ್ ಮೂಲಕ ತಿರುಗೇಟು ನೀಡಿದೆ. ''ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು!''
''ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ. ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ!'' ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ:ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸೆಲ್ಯೂಟ್ ಮಾಡಲು ಇಚ್ಛಿಸಿದ್ದೆ: ಬಾವುಕರಾದ ಪ್ರಧಾನಿ ಮೋದಿ
ಸಚಿವ ಪ್ರಿಯಾಂಕ್ ಖರ್ಗೆ, ಗುಂಡೂರಾವ್ ಟೀಕೆ:ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಬಿಜೆಪಿ ನಾಯಕರು ಪ್ರಧಾನಿ ಮೋದಿ ಸ್ವಾಗತಕ್ಕಾಗಿ ರಸ್ತೆ ಬದಿ ನಿಂತಿರುವುದಕ್ಕೆ ವ್ಯಂಗ್ಯವಾಡಿದರು. ''ರಾಜಕೀಯವಾಗಿ, ಸೈದ್ಧಂತಿಕವಾಗಿ ವಿರೋಧಿಗಳಾಗಿದ್ದರೂ ಬಿಜೆಪಿ ಕರ್ನಾಟಕ (@BJP4Karnataka) ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ. ಪ್ರಧಾನಿ ಮುಂದೆ ಬ್ಯಾರಿಕೇಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ'' ಎಂದು ಟೀಕಿಸಿದ್ದಾರೆ.
ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ "ವಿರೋಧ ಪಕ್ಷದ ನಾಯಕ"ನ ಆಯ್ಕೆ ಸಾಧ್ಯವಾಗುವುದೇ?. "ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ. ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಕುಟುಕಿದ್ದಾರೆ.
ಕಾಲಕಸಕ್ಕಿಂತ ಕಡೆಯದಾಗಿ ನೋಡುತ್ತಾರೆ:ಈ ಸಂಬಂಧ ಸಚಿವ ದಿನೇಶ್ ಗುಂಡುರಾವ್ ಟ್ವೀಟ್ ಮಾಡಿ, ''ISRO ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸಿದ್ದ ಮೋದಿಯವರನ್ನು ಸ್ವಾಗತಿಸಲು ಸ್ವತಃ ರಾಜ್ಯ ಬಿಜೆಪಿ ನಾಯಕರಿಗೂ ಅವಕಾಶ ಕೊಟ್ಟಿಲ್ಲ. ರಾಜ್ಯಾಧ್ಯಕ್ಷ @nalinkateel, ಬೊಮ್ಮಾಯಿ ಅವರನ್ನು ಕೂಡ ಹತ್ತಿರಕ್ಕೆ ಬಿಟ್ಟು ಕೊಳ್ಳಲಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಇದಕ್ಕಿಂತ ಅಪಮಾನವುಂಟೆ?'' ಎಂದು ಪ್ರಶ್ನಿಸಿದ್ದಾರೆ.
''ಬಿಜೆಪಿ ನಾಯಕರಿಗೆ ಕಿಂಚಿತ್ತಾದರೂ ಆತ್ಮಗೌರವ ಬೇಡವೆ? ರಾಜ್ಯ ಬಿಜೆಪಿ ನಾಯಕರನ್ನು ಅವರ ಪಕ್ಷದ ವರಿಷ್ಟರು ಕಾಲಸಕಕ್ಕಿಂತ ಕಡೆಯಾಗಿ ನೋಡುತ್ತಾರೆ ಎಂಬುದಕ್ಕೆ ಮೋದಿಯವರ ಇಂದಿನ ವರ್ತನೆಯೇ ಸಾಕ್ಷಿ. @BJP4Karnataka ನಾಯಕರು ಇಂದು ಮೋದಿ ಅವರ ಮುಂದೆ ಹಲ್ಲುಗಿಂಜಿ ಜೀ ಹುಜೂರು ಎಂದು ಮಂಡಿಯೂರಿ ನಿಂತರೂ, ಮೋದಿಯವರು ಕಣ್ಣೆತ್ತಿಯೂ ನೋಡಿಲ್ಲ'' ಎಂದು ಟೀಕಿಸಿದ್ದಾರೆ.
''ಮೋದಿ ಅವರ ಸರ್ವಾಧಿಕಾರಿ ಮನಃಸ್ಥಿತಿಯ ಬಗ್ಗೆ ಸತ್ಯ ಹೇಳಿದಾಗಲೆಲ್ಲಾ @BJP4Karnataka ಯವರು ಎಗರೆಗರಿ ಬೀಳುತ್ತಿದ್ದರು. ಬಹುಶಃ ರಾಜ್ಯ ಬಿಜೆಪಿ ನಾಯಕರಿಗೆ ಇಂದು ಮೋದಿಯವರ ಸರ್ವಾಧಿಕಾರಿ ಮನೋಭಾವದ ಸತ್ಯದರ್ಶನವಾಗಿರಬಹುದು. ಬಿಜೆಪಿ ನಾಯಕರೇ, ಇನ್ನೆಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ? ಆತ್ಮವಿಮರ್ಶೆ ಮಾಡಿಕೊಳ್ಳಿ'' ಎಂದು ಪ್ರಶ್ನಿಸಿದ್ದಾರೆ.
ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?:ಬಿಜೆಪಿ ನಾಯಕರದ್ದು ಎಂತಹಾ ದುಃಸ್ಥಿತಿ. ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.