ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿ ಕುರಿತ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಆದೇಶ ಹೊರಡಿಸಿದ್ದಾರೆ. ಬುಧವಾರದಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ' ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಈ ಕಾರ್ಡ್ ನೋಂದಣಿ, ಹಂಚಿಕೆ ಸೇರಿದಂತೆ ಕಾರ್ಡ್ಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯನ್ನು ದಿನಾಂಕ 29-03-2023 ರಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ಆಯೋಜಕರಿಗೂ ಕಳುಹಿಸಿದ್ದಾರೆ. ಅಲ್ಲದೇ, ಮುಂದಿನ ಆದೇಶದವರೆಗೆ ಆಯುಷ್ಮಾನ್ ಭಾರತ್ ಗುರುತಿನ ಚೀಟಿಯ ಎಲ್ಲಾ ಚಟುವಿಟಕೆಗಳು ಮುಂದಿನ ಆದೇಶದವರೆಗೂ ಸ್ಥಗಿತವಾಗಲಿದೆ.
ಇದರಿಂದ ರಾಜ್ಯದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಸದ್ಯಕ್ಕೆ ಸಿಗುವುದಿಲ್ಲ ಎಂಬಂತಾಗಿದೆ. ರಾಜ್ಯಾದ್ಯಂತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್‌ಕೆ ಕಾರ್ಡನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ. 10 ಶುಲ್ಕದೊಂದಿಗೆ ನೀಡಲಾಗುತ್ತಿತ್ತು. ಬೆಂಗಳೂರು ಒನ್ ಕರ್ನಾಟಕ ಒನ್ ಮತ್ತು ಸೇವಾ ಸೀಂಧು ಕೇಂದ್ರಗಳಲ್ಲಿ 35 ರೂ. ಶುಲ್ಕದೊಂದಿಗೆ ಎಬಿ-ಎಆರ್‌ಕೆ ಕಾರ್ಡ್ ನೀಡಲಾಗುತ್ತಿತ್ತು. ಆದರೆ, ಈಗ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಆಯುಷ್ಮಾನ್ ಕಾರ್ಡ್ ವಿತರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ.