ಬೆಂಗಳೂರು: ವಿಧಾನ ಪರಿಷತ್ ಸಭಾಂಗಣದಲ್ಲಿ ಡಿ. 15ರಂದು ನಡೆದ ಘಟನೆಯ ಬಗ್ಗೆ ಸಭಾಪತಿ ಪೀಠದಲ್ಲಿ ಕುಳಿತವರ ಬಗ್ಗೆ ಹಾಗೂ ಉಪ ಸಭಾಪತಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪತ್ರ ಬರೆದು ಒತ್ತಾಯಿಸಿದ್ದಾರೆ.
ನೀವೊಬ್ಬ ಸಜ್ಜನ ಪ್ರಾಮಾಣಿಕ ರಾಜಕಾರಣಿ ಎಂಬ ನನ್ನ ಅಭಿಪ್ರಾಯ ಈಗಲೂ ಬದಲಾಗಿಲ್ಲ. ನಿಮ್ಮ ರಾಜಕೀಯ ಪ್ರಯಾಣದಲ್ಲಿ ಈ ಕರಾಳ ಘಟನೆ ಕಪ್ಪು ಚುಕ್ಕೆಯಾಗಿದ್ದು, ನಿಮ್ಮ ರಾಜಕೀಯ ದುರಂತ ಘಟನೆಯಾಯಿತು. ನೀವು ಸಭಾಪತಿಯಾಗಿದ್ದ ಈ ಸಂದರ್ಭದಲ್ಲಿ ನಡೆಯಲಾಗದ್ದು ನಡೆದು ಸಂಸದೀಯ ಇತಿಹಾಸದಲ್ಲಿ ದುರ್ಘಟನೆಯಾಗಿ ದಾಖಲಾಯಿತು. ಸರ್ವಶ್ರೇಷ್ಠ ಸದನದ ಹೆಮ್ಮೆಯ ಪರಂಪರೆ ಮುರಿದು ಬಿತ್ತು. 2017ರ ಮೇ 30ರಂದು ಅಂದಿನ ಸಭಾಪತಿಯಾಗಿದ್ದ ಡಿ.ಹೆಚ್.ಶಂಕರಮೂರ್ತಿಯವರ ಮೇಲೆ ಕಾಂಗ್ರೆಸ್ ಪಕ್ಷ ನೀಡಿದ ಅವಿಶ್ವಾಸ ನೋಟಿಸ್ ನಾವು ನಿಮಗೆ ನೀಡಿದ ಅವಿಶ್ವಾಸ ನೋಟಿಸ್ ಮಾದರಿಯಲ್ಲಿ ಯಾವುದೇ ನಿಖರತೆ ಹಾಗೂ ಆಪಾದನೆಗಳನ್ನು ಹೊಂದಿರಲಿಲ್ಲ. ಆದರೂ ಸಹ ಚರ್ಚೆ ಮತ್ತು ಮತಕ್ಕೆ ಹಾಕಲು ಅಂದಿನ ಸಭಾಪತಿಗಳಾಗಿದ್ದ ಡಿ.ಹೆಚ್.ಶಂಕರಮೂರ್ತಿಯವರು ಅವಕಾಶ ನೀಡಿದ್ದನ್ನೂ ನೀವು ಏಕೆ ಗಮನಿಸಲಿಲ್ಲ ಹಾಗೂ ಸಂಪ್ರದಾಯವನ್ನು ಪಾಲಿಸಲಾಗಲಿಲ್ಲ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿ ಪ್ರಶ್ನಿಸಿದ್ದಾರೆ.
ನೀವು ಸಭಾಪತಿ ಸ್ಥಾನದ ಘನತೆ ಗೌರವ ಕಾಪಾಡುವುದರ ಬದಲು ನಿಮ್ಮ ಸ್ಥಾನ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದು ದುರ್ದೈವದ ಸಂಗತಿ. ಇದರ ಪರಿಣಾಮವಾಗಿ, ಡಿ. 10ರ ಸಂಜೆ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡುವ ಸಂದರ್ಭದಲ್ಲಿ ನಾನು ಕಾನೂನು ತಜ್ಞರ ಸಲಹೆ ಪಡೆದಿದ್ದೇನೆ. ಅವಿಶ್ವಾಸ ಸೂಚಕರಿಗೆ ಹಿಂಬರಹ ನೀಡಲು ಕಡತದಲ್ಲಿ ಆದೇಶಿಸಿದ್ದೇನೆ ಎಂದು ರೂಲಿಂಗ್ ನೀಡಿದ್ದೀರಿ. ನಿಮ್ಮ ತೀರ್ಮಾನವನ್ನು ಕಡತದಲ್ಲಿ ಬರೆಯುವ ಬದಲು ಸದನದಲ್ಲಿಯೇ ಪ್ರಕಟ ಮಾಡಬೇಕಾದದ್ದು ನಿಯಮ. ಆದರೆ ನೀವು ಹಾಗೆ ಮಾಡಿಲ್ಲ. ಬದಲಾಗಿ ಸಂಜೆ 6:59ಕ್ಕೆ ರೂಲಿಂಗ್ ನೀಡಿದ ನಂತರ ತಮ್ಮ ಕೊಠಡಿಗೆ ಹೋಗಿ 7:15ಕ್ಕೆ ಕಡತದಲ್ಲಿ ಬರೆದು ಸಹಿ ಹಾಕುವ ಮೂಲಕ ಕಡತವನ್ನು ಸೃಷ್ಟಿಸಿದ್ದು, ಇದು ಯಾರು ಮಾಡಬಾರದ ಹೀನ ಕೃತ್ಯ. ಸಭಾಪತಿಯವರಾದ ನೀವು ಹೀಗೆ ಯಾಕೆ ಮಾಡಿದ್ದೀರಿ? ಕುರ್ಚಿಗಾಗಿ ಇಷ್ಟೊಂದು ಬದಲಾಗುವ, ಅಪ್ರಮಾಣಿಕರಾಗುವ ಅವಶ್ಯಕತೆ ಇತ್ತೇ? ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸುದೀರ್ಘ ಪತ್ರದಲ್ಲಿ ಮಂಜಿನಾಥ್ ಉಲ್ಲೇಖಿಸಿದ್ದಾರೆ.