ಕರ್ನಾಟಕ

karnataka

ETV Bharat / state

ಬಿಜೆಪಿ ಕಾರ್ಯಕರ್ತರಿಂದ ನಿಂದನೆ, ಬೆದರಿಕೆ: ಪೊಲೀಸರಿಗೆ ಎಎಪಿ ದೂರು.. - ಆಮ್‌ ಆದ್ಮಿ ಪಾರ್ಟಿ

ಸಿ ವಿ ರಾಮನ್‌ ನಗರದ ಬಿಜೆಪಿಗೆ ಆಮ್‌ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಕ್ಷೇತ್ರದೆಲ್ಲೆಡೆ ಆಮ್‌ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದು ಆ ಪಕ್ಷದ ನಾಯಕರ ನಿದ್ದೆಗೆಡಿಸಿದೆ. ಆದ್ದರಿಂದ ಬೆಂಬಲಿಗರನ್ನು ಛೂ ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಎಪಿ ನಗರಾಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

ಎಎಪಿ ನಗರಾಧ್ಯಕ್ಷ ಮೋಹನ್‌ ದಾಸರಿ
ಎಎಪಿ ನಗರಾಧ್ಯಕ್ಷ ಮೋಹನ್‌ ದಾಸರಿ

By

Published : Jan 9, 2023, 9:18 PM IST

Updated : Jan 9, 2023, 10:02 PM IST

ಎಎಪಿ ನಗರಾಧ್ಯಕ್ಷ ಮೋಹನ್‌ ದಾಸರಿ ಅವರು ಮಾತನಾಡಿದರು

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ನ್ಯಾಯಾಧೀಶ ಎಂ. ವೆಂಕಟರಮಣಪ್ಪರಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಜೀವನ್‌ ಭೀಮಾ ನಗರದಲ್ಲಿ ನಡೆದಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪಕ್ಷದ ಬೆಂಗಳೂರು ಎಎಪಿ ನಗರಾಧ್ಯಕ್ಷ ಮೋಹನ್‌ ದಾಸರಿ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್‌ ದಾಸರಿ, ಸಿ ವಿ ರಾಮನ್‌ ವಿಧಾನಸಭಾ ಕ್ಷೇತ್ರದ ಮಲ್ಲೇಶ್‌ ಪಾಳ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯ ನೂತನ ಕಚೇರಿ ಉದ್ಘಾಟನೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ಎಂ. ವೆಂಕಟರಮಣಪ್ಪ ತಮ್ಮ ಮಕ್ಕಳ ಮಾಲೀಕತ್ವದ ಗೊಂಗೊರ ಹೋಟೆಲ್‌ಗೆ ತೆರಳಿದಾಗ, ಬಿಜೆಪಿ ಕಾರ್ಯಕರ್ತನೊಬ್ಬ ನಾಲ್ಕು ಗೂಂಡಾಗಳೊಂದಿಗೆ ಅಲ್ಲಿಗೆ ಬಂದು ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪಕ್ಷದ ಕಚೇರಿ ಹಾಗೂ ಅವರ ಹೋಟೆಲ್​ ಅನ್ನು ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ದಾಸರಿ ಆರೋಪಿಸಿದರು.

ಎಎಪಿ ಮುಖಂಡ ಎಂ. ವೆಂಕಟರಮಣಪ್ಪ ಅವರು ಮಾತನಾಡಿದರು

ಆಮ್‌ ಆದ್ಮಿ ಪಾರ್ಟಿ ಹೆದರುವುದಿಲ್ಲ: ಸಿ ವಿ ರಾಮನ್‌ ನಗರದ ಬಿಜೆಪಿ ಶಾಸಕರಿಗೆ ಆಮ್‌ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಕ್ಷೇತ್ರದೆಲ್ಲೆಡೆ ಆಮ್‌ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದು ಶಾಸಕರ ನಿದ್ದೆಗೆಡಿಸಿದೆ. ಆದ್ದರಿಂದ ಬೆಂಬಲಿಗರನ್ನು ಛೂ ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂತಹ ದುಷ್ಕೃತ್ಯಗಳಿಗೆ ಆಮ್‌ ಆದ್ಮಿ ಪಾರ್ಟಿ ಹೆದರುವುದಿಲ್ಲ. ಬಿಜೆಪಿಯ ಭ್ರಷ್ಟ ಆಡಳಿತವನ್ನು ಕೊನೆಗಾಣಿಸಿ, ಪಾರದರ್ಶಕ ಹಾಗೂ ಜನಪರ ಆಡಳಿತವನ್ನು ಅಧಿಕಾರಕ್ಕೆ ತರುವ ನಮ್ಮ ಪ್ರಯತ್ನ ಮುಂದುವರೆಯುತ್ತದೆ. ನಾವು ಇದರಲ್ಲಿ ಯಶಸ್ಸು ಕಾಣಲಿದ್ದೇವೆ ಎಂದು ಮೋಹನ್‌ ದಾಸರಿ ಹೇಳಿದರು.

ನಮ್ಮ ಕಚೇರಿಗೆ ಮಾಹಿತಿ ನೀಡಬಹುದು: ಎಎಪಿ ಮುಖಂಡ, ವಕೀಲ ಹಾಗೂ ಮಾಜಿ ನ್ಯಾಯಾಧೀಶ ಎಂ ವೆಂಕಟರಮಣಪ್ಪ ಮಾತನಾಡಿ, ನಾವು ಕಾನೂನು ಪಾಲನೆಯಲ್ಲಿ ನಂಬಿಕೆ ಹೊಂದಿದ್ದೇವೆ. ಬಿಜೆಪಿ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು ಎಂದು ಬಯಸುತ್ತೇವೆ. ಅದರ ಬದಲು, ರೌಡಿಗಳನ್ನು ಬಿಟ್ಟು ಧಮಕಿ ಹಾಕಿಸುವುದು ಸರಿಯಲ್ಲ. ಗೂಂಡಾಗಿರಿಗೆ ಅಂತ್ಯಹಾಡಲು ಸಿ ವಿ ರಾಮನ್‌ ನಗರದ ಜನರು ಮುಂದಾಗಬೇಕು. ಶಾಸಕರ ಬೆಂಬಲಿಗರಿಂದ ತೊಂದರೆ ಅನುಭವಿಸುವವರು ನಮ್ಮ ಕಚೇರಿಗೆ ಮಾಹಿತಿ ನೀಡಬಹುದು. ಕ್ಷೇತ್ರದ ಜನರನ್ನು ಗೂಂಡಾಗಿರಿಯಿಂದ ಕಾಪಾಡಲು ಆಮ್‌ ಆದ್ಮಿ ಪಾರ್ಟಿ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.

ವಾಹನ ಪಾರ್ಕಿಂಗ್​ ವಿಚಾರವಾಗಿ ಗಲಾಟೆ - ದೂರು: (ಬೆಂಗಳೂರು):ವಾಹನ ಪಾರ್ಕಿಂಗ್ ವಿಚಾರವಾಗಿ ಮೂವರು ಕೇಕ್ ಶಾಪ್ ಮ್ಯಾನೇಜರ್ ಜೊತೆ ಗಲಾಟೆ ಮಾಡಿಕೊಂಡು ಅವರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಇಂದಿರಾ ನಗರ ಠಾಣಾ ವ್ಯಾಪ್ತಿಯ ಸ್ಮೂರ್ ಕೇಕ್ ಶಾಪ್ ಮುಂಭಾಗದಲ್ಲಿ ನಡೆದಿದೆ. ಶೈಲೇಶ್ ಹಲ್ಲೆಗೊಳಗಾದ ಮ್ಯಾನೇಜರ್. ಈ ಘಟನೆ ಸಂಬಂಧ ಪೊಲೀಸರಿಗೆ ಈಗಾಗಲೇ ದೂರು ನೀಡಲಾಗಿದೆ.

ಇಂದಿರಾ ನಗರದ 100 ಅಡಿ ರಸ್ತೆಯಲ್ಲಿರುವ ಸ್ಮೂರ್ ಕೇಕ್ ಶಾಪ್‍ನ ಮೇಲೆ ಬಾರ್ ಇದೆ. ರಾತ್ರಿ 8: 30ರ ಸುಮಾರಿಗೆ ಬಾರ್​​ಗೆ ಬಂದಿದ್ದ ಮೂವರು ಕೇಕ್ ಶಾಪ್​ ಮುಂದೆ ಕಾರು ನಿಲ್ಲಿಸಿದ್ದಾರೆ. ಇದನ್ನು ನೋಡಿದ ಶಾಪ್ ಮ್ಯಾನೇಜರ್ ಶೈಲೇಶ್ ಇಲ್ಲಿ ಕಾರು ಪಾರ್ಕ್ ಮಾಡಬೇಡಿ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕರ ತಂಡ ಶೈಲೇಶ್ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಶೈಲೇಶ್ ತುಟಿ ಹಾಗೂ ಹಲ್ಲಿಗೆ ಗಾಯವಾಗಿದೆ. ಘಟನೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ:ಪಾರ್ಕಿಂಗ್ ಪ್ರಶ್ನಿಸಿದ್ದಕ್ಕೆ ಕೇಕ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ

Last Updated : Jan 9, 2023, 10:02 PM IST

ABOUT THE AUTHOR

...view details