ಕರ್ನಾಟಕ

karnataka

ETV Bharat / state

ಬೆಂಗಳೂರು: ಸಿಸೋಡಿಯಾ ಬಂಧನ ಖಂಡಿಸಿ ಬಿಜೆಪಿ ಕಚೇರಿಯೆದುರು ಆಪ್ ಪ್ರತಿಭಟನೆ

ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಆಪ್​ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದ್ದಾರೆ.

App protest
ಆಪ್ ಪ್ರತಿಭಟನೆ

By

Published : Feb 27, 2023, 10:59 PM IST

Updated : Feb 27, 2023, 11:07 PM IST

ಕೇಂದ್ರ ಸರ್ಕಾರ ವಿರುದ್ದ ಧಿಕ್ಕಾರ ಕೂಗಿದ ಆಪ್​ ಕಾರ್ಯಕರ್ತರು.

ಬೆಂಗಳೂರು :ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಸಿಬಿಐ ಬಂಧನ ಖಂಡಿಸಿ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯೆದುರು ಆಮ್‌ ಆದ್ಮಿ ಪಾರ್ಟಿ(ಆಪ್) ಕಾರ್ಯಕರ್ತರು ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆಯ ವೇಳೆ ಮಾತನಾಡಿದ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಪಕ್ಷವನ್ನು ವಿಭಜಿಸಿ ತಮ್ಮ ಪಕ್ಷದೊಂದಿಗೆ ವಿಲೀನಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದರು. ಆದರೆ ಆಪ್​ ನಾಯಕರಲ್ಲಿರುವ ಬದ್ಧತೆಯಿಂದಾಗಿ ಈ ಪ್ರಯತ್ನ ವಿಫಲವಾಯಿತು.

ಇದರಿಂದ ಹತಾಶೆಗೊಂಡ ಬಿಜೆಪಿಯು ಬೆದರಿಕೆ ತಂತ್ರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಿಗೆ ಕಿರುಕುಳ ನೀಡುತ್ತಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರ ನಡೆಯದೆ ಇದ್ದರೂ, ನೂತನ ಅಬಕಾರಿ ನೀತಿ ಇನ್ನೂ ಜಾರಿಗೆ ಬರದೇ ಇದ್ದರೂ ಸಿಸೋಡಿಯಾರನ್ನು ಕೇಂದ್ರ ಸರ್ಕಾರ ಟಾರ್ಗೆಟ್‌ ಮಾಡಿ ಖಜಾನೆಗೆ ನಷ್ಟ, ರಾಜ್ಯಕ್ಕೆ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪದ ಮೇಲೆ ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋಡಿಯಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದು, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷಿ ಸಿಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್‌ ಆದ್ಮಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುದನ್ನು ಅರಿತಿರುವ ಬಿಜೆಪಿಯು ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ. ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ನೀಡಲೂ ನಾವುಗಳು ಸಿದ್ಧವಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್‌ ದಾಸರಿ ಅವರು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್‌ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಷ್‌ ಸಿಸೋಡಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ ಎಂದು ಹೇಳಿದರು.

ಆಪ್​ ಸರ್ಕಾರ ಇರುವ ದೆಹಲಿಯಲ್ಲಿ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಆದರೆ ಬಿಜೆಪಿಗೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಸಚಿವರಾಗಿ ಮನೀಷ್‌ ಸಿಸೋದಿಯಾರವರು ಬರೋಬ್ಬರಿ 25,000ಕ್ಕೂ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಈ ವೇಳೆ ಶಾಂತಿ ಸುವ್ಯವಸ್ಥೆ ಕಾಪಡಲು ಪ್ರತಿಭಟನೆ ನಡೆಸುತ್ತಿದ್ದ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್‌ ಕಾಳಪ್ಪ, ಸುರೇಶ್‌ ರಾಥೋಡ್‌, ಜಗದೀಶ್‌ ವಿ ಸದಂ, ಸುಮನ್‌ ಪ್ರಶಾಂತ್‌, ರಾಜೇಂದ್ರ ಕುಮಾರ್‌, ಮೋಹನ್‌, ಕೀರ್ತನ್‌ ಕುಮಾರ್‌, ಶಾಶಾವಲ್ಲಿ, ಮಂಜುನಾಥ್‌, ಪ್ರಕಾಶ್‌ ಬೆಳ್ಳಂಕೊಂಡ ಮತ್ತಿತರ ನಾಯಕರು ಹಾಗೂ ಅನೇಕ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.

ಇದನ್ನೂ ಓದಿ :ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಆಗ್ರಹ: ಬೆಂಗಳೂರಲ್ಲಿ ಆಪ್​ ಮುಖಂಡರು, ಕಾರ್ಯಕರ್ತರು ಪೊಲೀಸ್​ ವಶಕ್ಕೆ

Last Updated : Feb 27, 2023, 11:07 PM IST

ABOUT THE AUTHOR

...view details