ಬೆಂಗಳೂರು: ಭೂತಾನ್‌ನಿಂದ ಅಡಕೆ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿತು. ಹಿರಿಯ ವಕೀಲರುಗಳಾದ ಬ್ರಿಜೇಶ್ ಕಾಳಪ್ಪ ಹಾಗೂ ಕೆ.ದಿವಾಕರ್ ಅವರು ನಿಯೋಗದಲ್ಲಿ ಇದ್ದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, ಭಾರತಕ್ಕೆ 15,000 ಕ್ವಿಂಟಾಲ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವು ಕರ್ನಾಟಕದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಅಡಿಕೆ ಬೆಳಗಾರರನ್ನು ಚಿಂತೆಗೀಡುಮಾಡಿದೆ. ಕಾಳುಮೆಣಸು ಬೆಳಗಾರರಿಗೆ ಆದ ಅನ್ಯಾಯವು ಅಡಿಕೆ ಬೆಳಗಾರರಿಗೂ ಆಗಲಿದೆ ಎಂದು ತಿಳಿದ ನಂತರ ನಮ್ಮ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ನಮ್ಮ ಪ್ರಯತ್ನವು ಯಶಸ್ವಿಯಾಗಲಿಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ನೀವು ಮಧ್ಯಪ್ರವೇಶಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಅಡಕೆ, ಕಾಳುಮೆಣಸು ಬೆಳೆಗಾರರ ಭವಿಷ್ಯದ ಜೊತೆ ಕೇಂದ್ರ ಸರ್ಕಾರದ ಚೆಲ್ಲಾಟ: ಎಎಪಿ ಆಕ್ರೋಶ
ಮೇಕ್ ಇನ್ ಇಂಡಿಯಾ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ವಿರುದ್ಧವಾಗಿ ವಿದೇಶದಲ್ಲಿ ಬೆಳೆದ ಅಡಕೆ, ಕಾಳುಮೆಣಸನ್ನು ಭಾರತಕ್ಕೆ ತರಿಸಿ, ʻಎಲ್ಲಾದರೂ ಬೆಳೆಯಿರಿ, ಭಾರತಕ್ಕೆ ತನ್ನಿʼ ಎಂಬ ನೀತಿಯನ್ನು ಅನುಸರಿಸುತ್ತಿರುವುದೇಕೆ?, ರಾಜಕೀಯ ಪ್ರಭಾವಿಗಳು ಇದರಲ್ಲಿ ಭಾಗಿಯಾಗಿ ಸಫೆಮಾ, ಫೆರಾ ಮುಂತಾದ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬರುತ್ತಿದ್ದು, ಜಾರಿ ನಿರ್ದೇಶನಾಲಯದಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಎಎಪಿ ಮುಖಂಡರು ಹಾಗೂ ಹಿರಿಯ ವಕೀಲರಾದ ಬ್ರಿಜೇಶ್ ಕಾಳಪ್ಪ ಮಾತನಾಡಿ, ನಮ್ಮಲ್ಲಿ ಬೆಳೆಯುವ ಅಡಕೆಗೆ ಹೋಲಿಕೆ ಮಾಡಿದರೆ ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಕೆಯು ಕಳಪೆ ಗುಣಮಟ್ಟದ್ದಾಗಿರಲಿದೆ. ಅದೇ ರೀತಿ, ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುವ ಕಾಳು ಮೆಣಸು ನಮ್ಮಲ್ಲಿ ಬೆಳೆಯುವ ಕಾಳುಮೆಣಸಿಗಿಂತ ಕಳಪೆ ಗುಣಮಟ್ಟದ್ದಾಗಿದೆ.