ಬೆಂಗಳೂರು: ಚಿಕ್ಕಪೇಟೆ ಸರ್ಕಾರಿ ಶಾಲೆ ಕಟ್ಟಡ ಮಾರಾಟ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಕೆಎಎಸ್ ಅಧಿಕಾರಿ, ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಹಾಗೂ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ, ಸ್ವಾತಂತ್ರ್ಯ ಪೂರ್ವದಲ್ಲಿ ದಾನಿಗಳು ನೀಡಿದ ಜಾಗದಲ್ಲಿ ಚಿಕ್ಕಪೇಟೆಯ ಸರ್ಕಾರಿ ಶಾಲೆಯನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಕಟ್ಟಡವನ್ನು ರಾಜ್ಯ ಬಿಜೆಪಿ ಸರ್ಕಾರವು ಮಾರಾಟ ಮಾಡಲು ನಿರ್ಧರಿಸಿರುವುದು ಭ್ರಷ್ಟಾಚಾರದ ಕರಾಳ ಸ್ವರೂಪ. ಕೋಟಿಗಟ್ಟಲೆ ಕಮಿಷನ್ ಆಸೆಗಾಗಿ ಅಮೂಲ್ಯ ಸಂಪತ್ತನ್ನು ಮಾರುವ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಎಎಪಿಯು ಬೃಹತ್ ಹೋರಾಟ ಮಾಡಲಿದೆ ಎಂದು ಹೇಳಿದರು.
ಎಎಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ ಆಡಳಿತ ಪಕ್ಷವು ಶೇಕಡಾ 40 ರಷ್ಟು ಕಮಿಷನ್ ಭ್ರಷ್ಟಾಚಾರದ ಮುಂದುವರಿದ ಭಾಗವಾಗಿ 10 ಸಾವಿರ ಚದರ ಅಡಿ ಇರುವಂತಹ, ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಶಾಲೆಯನ್ನು ಮಾರುವ ದುಸ್ಸಾಹಸಕ್ಕೆ ಕೈಹಾಕಿದ್ದರೂ ವಿರೋಧ ಪಕ್ಷವಾದ ಕಾಂಗ್ರೆಸ್ ಯಾಕೆ ವಿರೋಧಿಸುತ್ತಿಲ್ಲ. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ಶಾಸಕರ ಕರ್ತವ್ಯವಾಗಿದ್ದು, ಸ್ಥಳೀಯ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯ ಮಾರಾಟದಲ್ಲಿ ಅವರ ಪಾತ್ರವೇನು? ಎಂಬುದು ಜನರಿಗೆ ತಿಳಿಯಬೇಕು ಎಂದರು.
ಇದನ್ನೂ ಓದಿ:ಶ್ರೀರಾಮ ಕೂಡ ಬಿಜೆಪಿಯವರನ್ನು ಕ್ಷಮಿಸುವುದಿಲ್ಲ: ಭಾಸ್ಕರ್ ರಾವ್
ಶಾಲಾ ಕಟ್ಟಡ ಸರ್ಕಾರದ ವಶದಲ್ಲೇ ಇರಲಿ:ಒಂದೆಡೆ ಸರ್ಕಾರಿ ಶಾಲೆ ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ರಾಜ್ಯ ಶಿಕ್ಷಣ ಇಲಾಖೆ ಕರೆ ಕೊಟ್ಟಿದ್ದರೆ ಮತ್ತೊಂದೆಡೆ, ಐತಿಹಾಸಿಕ ಶಾಲಾ ಕಟ್ಟಡ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸದೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ. ಸಚಿವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದ್ದರೆ ಶಾಲಾ ಕಟ್ಟಡವನ್ನು ಸರ್ಕಾರದ ವಶದಲ್ಲೇ ಉಳಿಸಿಕೊಳ್ಳಲಿ ಎಂದು ತಿಳಿಸಿದರು.
300 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ: ಆಮ್ ಆದ್ಮಿ ಪಾರ್ಟಿಯ ಸ್ಥಳೀಯ ಮುಖಂಡರಾದ ಗೋಪಿನಾಥ್ ಮಾತನಾಡಿ, ಸರ್ಕಾರಿ ಶಾಲೆಯನ್ನು ಮಾರಾಟ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಕಟ್ಟಡದಲ್ಲಿ ಶಾಲೆ ಮಾತ್ರವಲ್ಲದೇ 141 ಮಳಿಗೆಗಳು, ಬ್ಯಾಂಕ್ ಹಾಗೂ ವಸತಿ ಗೃಹವಿದೆ. ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಈ ಆಸ್ತಿಯನ್ನು ಕೇವಲ 50 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಪ್ರತಿಯಾಗಿ ಖರೀದಿದಾರರಿಂದ ಶಾಸಕರು, ಸಚಿವರು ಹಾಗೂ ಸಿಎಂಗೆ ಕೋಟಿಗಟ್ಟಲೆ ಕಮಿಷನ್ ಸಿಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ವಕ್ತಾರರಾದ ಉಷಾ ಮೋಹನ್ ಭಾಗವಹಿಸಿದ್ದರು.
ಇದನ್ನೂ ಓದಿ:ಗಂಗಾವತಿ: ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ಆಪ್ ಸದಸ್ಯರಿಂದ ಪ್ರತಿಭಟನೆ