ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಪಕ್ಷದ ಮಾನ್ಯತೆ ಕೋರಿ ಹೈಕೋರ್ಟ್​ ಮೊರೆ ಹೋದ ಆಪ್​​

ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದಿಂದ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಿದ ನ್ಯಾಯಪೀಠ ಏಪ್ರಿಲ್​ 13ರೊಳಗೆ ಮನವಿ ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

AAP filed petition in Karnataka High Court Seeking National Party Status
ರಾಷ್ಟ್ರೀಯ ಪಕ್ಷ ಮಾನ್ಯತೆ ಕೋರಿ ಹೈಕೋರ್ಟ್ ಮೊರೆ ಹೋದ ಆಪ್​​

By

Published : Apr 6, 2023, 7:12 PM IST

Updated : Apr 6, 2023, 8:01 PM IST

ಬೆಂಗಳೂರು : ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡುವ ಕುರಿತಂತೆ ಆಮ್‌ ಆದ್ಮಿ ಪಕ್ಷ ಸಲ್ಲಿಸಿರುವ ಮನವಿಯನ್ನು ಏಪ್ರಿಲ್​ 13ರೊಳಗೆ ಪರಿಗಣಿಸುವಂತೆ ಹೈಕೋರ್ಟ್‌, ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಆಮ್‌ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ದರ್ಶನ್‌ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅಲ್ಲದೆ, ಏಪ್ರಿಲ್​ 13ಕ್ಕೆ ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಅಷ್ಟರೊಳಗೆ ಚುನಾವಣಾ ಆಯೋಗ ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ 2022ರ ಡಿಸೆಂಬರ್​​ 19ರಂದು ಸಲ್ಲಿಸಿರುವ ಮನವಿ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ. ದಿವಾಕರ್‌ ಅವರು, ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಮತಗಳಿಸಿ ಆಮ್‌ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷದ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಅದರಂತೆ 2022ರ ಡಿಸೆಂಬರ್​ 19ರಂದು ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಆನಂತರ 2023ರ ಮಾರ್ಚ್​ 15ಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದರೂ ಆಯೋಗ ಅದನ್ನು ಪರಿಗಣಿಸಿ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿಲ್ಲ. ಇದೀಗ ಕರ್ನಾಟಕದಲ್ಲಿ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಹಾಗಾಗಿ ಅಷ್ಟರಲ್ಲಿ ಮನವಿ ಪರಿಗಣಿಸಲು ನಿರ್ದೇಶನ ನೀಡಬೇಕು ಎಂದು ಕೋರಿದರು.

ಆಗ ನ್ಯಾಯಪೀಠ ಚುನಾವಣಾ ಆಯೋಗದ ಪರ ವಕೀಲರನ್ನು, ಈ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಏಕೆ ಪರಿಗಣಿಸಿಲ್ಲ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿತು. ಅದಕ್ಕೆ ಚುನಾವಣಾ ಆಯೋಗದ ಪರ ವಾದಿಸಿದ ವಕೀಲ ಶರತ್‌ ದೊಡ್ಡವಾಡ ಅವರು, ಎಎಪಿ ಸಲ್ಲಿಸಿರುವ ಮನವಿ ಆಯೋಗದ ಪರಿಶೀಲನೆಯಲ್ಲಿದೆ. ಒಂದು ವಾರದಲ್ಲಿ ಆ ಕುರಿತು ಆಯೋಗ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಏಪ್ರಿಲ್​ 13ರೊಳಗೆ ಮನವಿ ಪರಿಗಣಿಸುವಂತೆ ಆಯೋಗಕ್ಕೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ದೇಶದಲ್ಲಿ ಯಾವುದೇ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಅಥವಾ ಸ್ಥಾನಮಾನ ಪಡೆಯಲು ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಬೆಳೆದಿರಬೇಕು. ನಾಲ್ಕು ರಾಜ್ಯಗಳಲ್ಲಿ ಕನಿಷ್ಠ ಶೇಕಡಾ 6ರಷ್ಟು ಮತ ಪಡೆದಿರಬೇಕು. ದೆಹಲಿ, ಪಂಜಾಬ್‌, ಗೋವಾ ಮತ್ತು ಗುಜರಾತ್‌ ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿರುವ ಆಮ್‌ ಆದ್ಮಿ ಪಕ್ಷವು, ರಾಷ್ಟ್ರೀಯ ಪಕ್ಷವಾಗುವ ಎಲ್ಲ ಷರತ್ತುಗಳನ್ನು ಪೂರೈಸಿದೆ. ರಾಷ್ಟ್ರೀಯ ಪಕ್ಷದ ಸ್ಥಾನ ಮಾನ ನೀಡುವುದಕ್ಕೆ ಎಲ್ಲ ಅರ್ಹತೆಗಳನ್ನು ಹೊಂದಿದೆ. ಆದರೂ, ಚುನಾವಣಾ ಆಯೋಗದಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲು ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ಈ ಸಂಬಂಧ ಸೂಚನೆ ನೀಡಬೇಕು ಎಂದು ಕೋರಿ ಆಮ್‌ ಆದ್ಮಿ ಪಕ್ಷದಿಂದ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಇದನ್ನೂ ಓದಿ:32 ಶಾಸಕರ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಮೊಕದ್ದಮೆ: ಎಡಿಆರ್ ವರದಿ

Last Updated : Apr 6, 2023, 8:01 PM IST

ABOUT THE AUTHOR

...view details